ನ್ಯೂಯಾರ್ಕ್: ಇರಾನ್ ಮೇಲಿನ ಯುದ್ಧ ಸೇರಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ನಿಲುವುಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪ್‌ನಲ್ಲಿ ‘ನೋ ಕಿಂಗ್ಸ್’ (ಸರ್ವಾಧಿಕಾರ ಬೇಡ) ಹೆಸರಿನ ಬೃಹತ್ ರ್‍ಯಾಲಿ ಹಾಗೂ ಪ್ರತಿಭಟನೆಗಳು ಶನಿವಾರ ನಡೆದಿವೆ. ಅಮೆರಿಕದಲ್ಲಿ ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದಾರೆ. 50 ರಾಜ್ಯಗಳಲ್ಲಿ 3,100ಕ್ಕೂ ಹೆಚ್ಚು ರ್‍ಯಾಲಿಗಳು ಜರುಗಿವೆ.
ಅಮೆರಿಕದ ಮಿನಿಸೋಟಾ ನಗರದಲ್ಲಿ ಪ್ರತಿಭಟನೆ
ಅಮೆರಿಕದ ಮಿನಿಸೋಟಾ ನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪದಲ್ಲಿತ್ತು. ಪ್ರಸಿದ್ಧ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿನ ಮೂಲಕ ಟ್ರಂಪ್ ಸರ್ಕಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ನ್ಯೂಯಾರ್ಕ್ ನಗರದಿಂದ ಹಿಡಿದು ಡ್ರಿಗ್ಸ್ ಎಂಬ ಸಣ್ಣ ಊರಿನವರೆಗೆ ಎಲ್ಲೆಡೆ ರ್‍ಯಾಲಿಗಳು ನಡೆದವು. ಅಮೆರಿಕ ಮಾತ್ರವಲ್ಲದೆ ರೋಮ್, ಲಂಡನ್ ಮತ್ತು ಪ್ಯಾರಿಸ್ ಮೊದಲಾದ ಕಡೆಗಳಲ್ಲೂ ಪ್ರತಿಭಟನೆಗಳು ನಡೆದವು.
ವಾಷಿಂಗ್ಟನ್‌ನಲ್ಲಿ ಜನರು ‘ಕಿರೀಟ ಬಿಡು, ಕೋಡಂಗಿ’ ಎಂಬ ಬ್ಯಾನರ್‌ಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಹೆಚ್ಚಿನ ರ್‍ಯಾಲಿಗಳು ಶಾಂತಿಯುತವಾಗಿದ್ದವು. ಆದರೆ ಲಾಸ್ ಏಂಜಲೀಸ್‌ನಲ್ಲಿ ಪ್ರತಿಭಟನಾಕಾರರು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಬಾಟಲಿಗಳನ್ನು ಎಸೆದಿದ್ದರಿಂದ ಪೊಲೀಸರು ಅಶ್ರುವಾಯು ಬಳಸಿ, ಕೆಲವರನ್ನು ಬಂಧಿಸಿದರು.
ಏಕೆ ಪ್ರತಿಭಟನೆ?:
ಅಧ್ಯಕ್ಷ ಟ್ರಂಪ್ ಅವರ ಏಪಕಕ್ಷೀಯ ಯುದ್ಧ ನೀತಿ ಅಮೆರಿಕಕ್ಕೆ ಮಾರಕವಾಗುತ್ತಿದೆ. ಕದನ ಕಣದಲ್ಲಿ ಅಮೆರಿಕ ಬಹುತೇಕ ಏಕಾಂಗಿಯಾಗಿದೆ ಎಂಬುದು ಜನರ ಆರೋಪ. ಜತೆಗೆ, ಕಠಿಣ ವಲಸೆ ನೀತಿ, ತೃತೀಯ ಲಿಂಗಿಗಳ ಹಕ್ಕನ್ನು ಕಸಿದುಕೊಳ್ಳುವುದು ಹಾಗೂ ಸಿರಿವಂತರ ಆರ್ಥಿಕ ಶಕ್ತಿಯನ್ನು ವಿರೋಧಿಸಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಜೂನ್ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಪ್ರತಿಭಟನೆಯಲ್ಲೂ ಲಕ್ಷಾಂತರ ಜನರು ಭಾಗವಹಿಸಿದ್ದರು.
