ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್‌-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ.

 ಇಸ್ಲಾಮಾಬಾದ್‌: ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್‌-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುಮಾರು 21 ಗಂಟೆಗಳಿಂದ ನಡೆಯುತ್ತಿದ್ದ ಮ್ಯಾರಥಾನ್‌ ಮಾತುಕತೆ ಅರ್ಧಕ್ಕೇ ಮೊಟಕುಗೊಳಿಸಿ ಅಮೆರಿಕ ಮತ್ತು ಇರಾನ್‌ ನಿಯೋಗ ಸ್ವದೇಶಕ್ಕೆ ವಾಪಸಾಗಿದೆ.

ಅಮೆರಿಕದ ಅಳತೆ ಮೀರಿದ ಬೇಡಿಕೆಗಳಿಂದಾಗಿ ಈ ಸಂಧಾನ ಮಾತುಕತೆ ಯಶಸ್ವಿಯಾಗಿಲ್ಲ ಎಂದು ಇರಾನ್‌ ಹೇಳಿದರೆ, ಅಣ್ವಸ್ತ್ರ ಕನಸು ಕೈಬಿಡುವ ವಿಚಾರದಲ್ಲಿ ಇಸ್ಲಾಮಿಕ್‌ ರಿಪಬ್ಲಿಕ್‌ ಸರ್ಕಾರ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮಾತುಕತೆ ಅಂತಿಮ ಒಪ್ಪಂದವೊಂದಕ್ಕೆ ಬರುವಲ್ಲಿ ವಿಫಲವಾಯಿತು ಎಂದು ಅಮೆರಿಕದ ನಿಯೋಗ ದೂರಿದೆ.

ಮಾತುಕತೆ ಮುರಿದುಬಿದ್ದ ಬಳಿಕ ಎರಡೂ ದೇಶಗಳ ನಡುವಿನ ಎರಡು ವಾರಗಳ ಕದನ ವಿರಾಮದ ಪಾಲನೆಯ ಕುರಿತು ಅನುಮಾನ ಮೂಡಿದೆ. ಒಂದು ವೇಳೆ ಇರಾನ್‌ ಹೋರ್ಮುಜ್‌ ಜಲಸಂಧಿ ವಿಚಾರವಾಗಿ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಹೋದರೆ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಈಗಾಗಲೇ ಎಚ್ಚರಿಸಿದ್ದರು. ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಇರಾನ್‌ ಮೇಲೆ ದಾಳಿ ನಡೆಸುತ್ತಾರಾ, ಮತ್ತೊಮ್ಮೆ ಮಧ್ಯಪ್ರಾಚ್ಯ ಸಂಘರ್ಷ ಆರಂಭವಾಗಲಿದೆಯೇ ಎಂಬ ಆತಂಕ ಇದೀಗ ಶುರುವಾಗಿದೆ.

21 ತಾಸಿನ ಮ್ಯಾರಥಾನ್‌ ಮಾತುಕತೆ:

ಇಸ್ರೇಲ್‌, ಅಮೆರಿಕ ಹಾಗೂ ಇರಾನ್‌ ನಡುವಿನ 40 ದಿನಗಳ ಸಂಘರ್ಷಕ್ಕೆ ಕಡಿವಾಣ ಹಾಕುವ ಸಲುವಾಗಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಬುಧವಾರ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿತ್ತು. ಇದರ ಭಾಗವಾಗಿ ಇರಾನ್‌ ಹಾಗೂ ಅಮೆರಿಕವು ಇಸ್ಲಾಮಾಬಾದ್‌ನಲ್ಲಿ ಶನಿವಾರದಿಂದ ಸಂಧಾನ ಮಾತುಕತೆ ಆರಂಭಿಸಿತ್ತು. ಅಮೆರಿಕದಿಂದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ನೇತೃತ್ವದ ನಿಯೋಗ ಹಾಗೂ ಇರಾನ್‌ನಿಂದ ಸ್ಪೀಕರ್‌ ಮೊಹಮ್ಮದ್‌ ಬಘರ್‌ ಕಾಲಿಬಾಫ್‌ ಮತ್ತು ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ನಿಯೋಗ ಪಾಲ್ಗೊಂಡಿತ್ತು.

ಮಾತುಕತೆ ವೇಳೆ ಹೋರ್ಮುಜ್ ಜಲಸಂಧಿ, ಅಣು ಯೋಜನೆ, ಯುದ್ಧ ಪರಿಹಾರ ಮತ್ತು ನಿರ್ಬಂಧಗಳನ್ನು ತೆರವುಗೊಳಿಸುವುದು ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. ಪಾಕಿಸ್ತಾನದ ಮೂಲಗಳ ಪ್ರಕಾರ ಕೆಲವು ವಿಚಾರಗಳು ಚರ್ಚೆಗೆ ಬಂದಾಗ ಎರಡೂ ನಿಯೋಗಗಳ ನಡುವೆ ಬಿಸಿಬಿಸಿ ಚರ್ಚೆಯೂ ನಡೆದಿದೆ.

ಯುದ್ಧದ ಮೂಲಕ ಸಾಧಿಸಲಾಗದ ಬೇಡಿಕೆ:

ಸಂಧಾನ ವೈಫಲ್ಯಕ್ಕೆ ನಂತರ ಸ್ಪಷ್ಟೀಕರಣ ನೀಡಿರುವ ಇರಾಕ್‌, ಮಾತುಕತೆ ನಡುವೆಯೇ ಅಮೆರಿಕ ನಿಯೋಗ ಎದ್ದುಹೋಗಿದೆ. ಯುದ್ಧದ ಮೂಲಕ ಸಾಧಿಸಲಾಗದ ಬೇಡಿಕೆಗಳನ್ನು ಅ‍ವರು ನಮ್ಮ ಮುಂದಿಟ್ಟಿದ್ದರು. ಅದಕ್ಕೆ ನಾವು ಒಪ್ಪಲಿಲ್ಲ. ಹೀಗಾಗಿ ಮಾತುಕತೆ ಅರ್ಧದಲ್ಲೇ ಅಂತ್ಯಗೊಂಡಿತು ಎಂದು ಹೇಳಿದೆ.

ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್‌ ಬಘಾಯ್‌ ಅವರು, ರಾಜತಾಂತ್ರಿಕತೆಗೆ ಯಾವುದೇ ಅಂತ್ಯವಿಲ್ಲ. ಮಾತುಕತೆ ವಿಫಲವಾಗಿದ್ದರೂ ಎರಡೂ ಕಡೆಯವರು ಕೆಲ ವಿಚಾರದಲ್ಲಿ ಒಮ್ಮತಾಭಿಪ್ರಾಯಕ್ಕೆ ಬಂದಿದ್ದರು. ಆದರೆ, 2-3 ಪ್ರಮುಖ ವಿಚಾರದಲ್ಲಿ ಏಕಾಭಿಪ್ರಾಯಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾತುಕತೆಯು ಒಪ್ಪಂದವಾಗಿ ಬದಲಾಗುವಲ್ಲಿ ವಿಫಲವಾಯಿತು ಎಂದು ತಿಳಿಸಿದ್ದಾರೆ.

ಮಾತುಕತೆ ವೈಫಲ್ಯಕ್ಕೆ ಇರಾನ್‌ ನಡೆಯೇ ಕಾರಣ ಎಂದು ಆರೋಪಿಸಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅ‍ವರು, ಇರಾನ್‌ ತನ್ನ ಅಣ್ವಸ್ತ್ರದ ಕನಸು ಕೈಬಿಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಇರಾನ್‌ ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಈ ಮಾತುಕತೆ ವಿಫಲವಾಯಿತು. ಅಮೆರಿಕದ ಕಡೆಯಿಂದ ಅಂತಿಮ ಹಾಗೂ ಅತ್ಯುತ್ತಮ ಆಫರ್‌ ಅನ್ನು ಅವರ ಮುಂದಿಡಲಾಗಿತ್ತು ಎಂದು ಹೇಳಿದ್ದಾರೆ.

ಮತ್ತೆ ಸಂಧಾನ ಸಭೆ ನಡೆಯುತ್ತಾ? ಇಲ್ಲವೆ ಸಮರ ಶುರುವಾಗುತ್ತಾ?

ಭಾನುವಾರ ಪಾಕ್‌ನಲ್ಲಿ ನಡೆದ ಅಮೆರಿಕ - ಇರಾನ್‌ ಸಂಧಾನ ವಿಫಲವಾದ ಬೆನ್ನಲ್ಲೇ ಮುಂದೇನು ಎಂಬ ಪ್ರಶ್ನೆ ಎದ್ದಿದೆ. ಮುಂದಿನ ಸುತ್ತಿನ ಮಾತುಕತೆ ಬಗ್ಗೆ ಉಭಯ ದೇಶಗಳು ಯಾವುದೇ ಸುಳಿವು ನೀಡಿಲ್ಲ. ಮಾತುಕತೆ ನಡೆಯದೇ ಇದ್ದರೆ ಆಗೇನು? ಮತ್ತೆ ಯುದ್ಧ ಅನಿವಾರ್ಯವಾಗಲಿದೆಯೇ? ಆಗುವುದಾದರೆ ಟ್ರಂಪ್‌ ಎಚ್ಚರಿಸಿದಂತೆ 24 ಗಂಟೆಗಳಲ್ಲೇ ಆಗುತ್ತಾ? ಎಂಬ ಪ್ರಶ್ನೆಗಳು ಎದ್ದಿವೆ.

ಇರಾನ್‌ ಮೊಂಡು ಹಟ

ಇರಾನ್‌ ತನ್ನ ಅಣ್ವಸ್ತ್ರದ ಕನಸು ಕೈಬಿಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಇರಾನ್‌ ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಈ ಮಾತುಕತೆ ವಿಫಲವಾಯಿತು. ನಮಗಿಂತ ಇದು ಇರಾನ್‌ಗೆ ಬ್ಯಾಡ್‌ ನ್ಯೂಸ್‌.

- ಜೆ.ಡಿ. ವ್ಯಾನ್ಸ್‌, ಅಮೆರಿಕ ಉಪಾಧ್ಯಕ್ಷ

ಮಾತುಕತೆ ಸರಾಗವಾಗಿ ನಡೆದಿತ್ತು. ಆದರೆ ವ್ಯಾನ್ಸ್‌ಗೆ ನೆತನ್ಯಾಹು ಕರೆ ಮಾಡಿದಾಗ ಸಭೆ ಇರಾನ್‌ ಹಿತಾಸಕ್ತಿಯತ್ತ ಹೊರಳಿತು. ಯುದ್ಧದ ಮೂಲಕ ಸಾಧಿಸಲು ಸಾಧ್ಯವಾಗದ್ದನ್ನುಇಲ್ಲಿ ಸಾಧಿಸಲು ಅಮೆರಿಕ ಯತ್ನಿಸಿತು.

- ಅಬ್ಬಾಸ್‌ ಅರ್ಗಾಚಿ, ಇರಾನ್ ವಿದೇಶಾಂಗ ಸಚಿವ