ಬೀಜಿಂಗ್‌ಗಿಂತ ಮುಂಬೈ ಹೆಚ್ಚು ಶ್ರೀಮಂತರ ನಗರ!

| Published : Mar 27 2024, 01:02 AM IST

ಸಾರಾಂಶ

ಅತ್ಯಂತ ಹೆಚ್ಚಿನ ಬಿಲಿಯನೇರ್‌ಗಳನ್ನು (ಶತ ಕೋಟ್ಯಧೀಶ) ಹೊಂದಿದ ಏಷ್ಯಾದ ನಂ.1 ನಗರವೆಂಬ ಹಿರಿಮೆ ಇದೇ ಮೊದಲ ಬಾರಿಗೆ ಮುಂಬೈ ಪಾಲಾಗಿದೆ.

ಮುಂಬೈ: ಅತ್ಯಂತ ಹೆಚ್ಚಿನ ಬಿಲಿಯನೇರ್‌ಗಳನ್ನು (ಶತ ಕೋಟ್ಯಧೀಶ) ಹೊಂದಿದ ಏಷ್ಯಾದ ನಂ.1 ನಗರವೆಂಬ ಹಿರಿಮೆ ಇದೇ ಮೊದಲ ಬಾರಿಗೆ ಮುಂಬೈ ಪಾಲಾಗಿದೆ. ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಚೀನಾದ ರಾಜಧಾನಿ ಬೀಜಿಂಗ್‌ ಅನ್ನು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಹಿಂದಿಕ್ಕಿದೆ. ಇನ್ನು ಜಾಗತಿಕ ಪಟ್ಟಿಯಲ್ಲಿ ನ್ಯೂಯಾರ್ಕ್‌, ಲಂಡನ್‌ ನಂತರದ ಸ್ಥಾನವನ್ನು ಮುಂಬೈ ಪಡೆದುಕೊಂಡಿದೆ.ಹುರೂನ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಅನ್ವಯ ಮುಂಬೈನಲ್ಲಿ 91 ಶತಕೋಟ್ಯಧೀಶರು ಇದ್ದರೆ, ಬೀಜಿಂಗ್‌ನಲ್ಲಿ ಈ ಸಂಖ್ಯೆ 90 ಇದೆ.ಇನ್ನು ಒಟ್ಟಾರೆ ಭಾರತದಲ್ಲಿ 271 ಬಿಲಿಯನೇರ್‌ಗಳಿದ್ದರೆ, ಚೀನಾದಲ್ಲಿ 814 ಬಿಲಿಯನೇರ್‌ಗಳು ಇದ್ದಾರೆ ಎಂದು ವರದಿ ಹೇಳಿದೆ. ಭಾರತದ 271 ಬಿಲಿಯನೇರ್‌ಗಳ ಒಟ್ಟು ಆಸ್ತಿ 1 ಲಕ್ಷ ಕೋಟಿ ಡಾಲರ್‌ನಷ್ಟಿದೆ.

ಅಂಬಾನಿ ನಂ.1:ಭಾರತದ ಶ್ರೀಮಂತರ ಸಾಲಿನಲ್ಲಿ ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅಗ್ರಸ್ಥಾನ ಪಡೆದಿದ್ದಾರೆ. ವಿಶ್ವದಲ್ಲಿ ಅಂಬಾನಿ 10ನೇ ಸ್ಥಾನದಲ್ಲಿ, ಅದಾನಿ 15ನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಶ್ರೀಮಂತರ ಏಳಿಗೆ:

ಕಳೆದ ಒಂದು ವರ್ಷದಲ್ಲಿ ಚೀನಾದಲ್ಲಿ ಕೇವಲ 55 ಹೊಸ ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ 94 ಇದೆ. ಇದೇ ಅವಧಿಯಲ್ಲಿ ಮುಂಬೈನಲ್ಲಿ 27 ಬಿಲಿಯನೇರ್‌ಗಳು ಮತ್ತು ಬೀಜಿಂಗ್‌ನಲ್ಲಿ 6 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ ಎಂದು ವರದಿ ಹೇಳಿದೆ.