ಅಫ್ಘಾನಿಸ್ಥಾನದ ತಾಲಿಬಾನ್‌ ಸರ್ಕಾರವನ್ನು ಮೊಟ್ಟಮೊದಲ ಬಾರಿ ಅಧಿಕೃತವೆಂದು ಮಾನ್ಯ ಮಾಡಿ ಸುದ್ದಿಯಾಗಿದ್ದ ರಷ್ಯಾ, ಇದೀಗ ತಾಲಿಬಾನ್‌ ಜತೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಶಸ್ತ್ರಾಸ್ತ್ರ ವಿನಿಮಯ, ಪರವಾನಗಿ, ಸೇನಾ ತಂತ್ರಜ್ಞಾನ ಹಾಗೂ ಜಂಟಿ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.

-ದೇಶವೊಂದರ ಜತೆ ತಾಲಿಬಾನ್‌ ಮೊದಲ ಡೀಲ್‌

-ತಾಲಿಬಾನ್‌ ಮಾನ್ಯ ಮಾಡಿದ ಬೆನ್ನಲ್ಲೇ ಬೆಳವಣಿಗೆ

-ಉಕ್ರೇನ್‌ ಯುದ್ಧಕ್ಕೆ ತಾಲಿಬಾನ್‌ ಉಗ್ರರ ನೆರವು?

ನವದೆಹಲಿ: ಅಫ್ಘಾನಿಸ್ಥಾನದ ತಾಲಿಬಾನ್‌ ಸರ್ಕಾರವನ್ನು ಮೊಟ್ಟಮೊದಲ ಬಾರಿ ಅಧಿಕೃತವೆಂದು ಮಾನ್ಯ ಮಾಡಿ ಸುದ್ದಿಯಾಗಿದ್ದ ರಷ್ಯಾ, ಇದೀಗ ತಾಲಿಬಾನ್‌ ಜತೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಶಸ್ತ್ರಾಸ್ತ್ರ ವಿನಿಮಯ, ಪರವಾನಗಿ, ಸೇನಾ ತಂತ್ರಜ್ಞಾನ ಹಾಗೂ ಜಂಟಿ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ತಾಲಿಬಾನ್‌ ರಕ್ಷಣಾ ಸಚಿವ ಮೌಲವಿ ಮೊಹಮ್ಮದ್‌ ಯಾಕೂಬ್‌ ಹಾಗೂ ರಷ್ಯಾ ಭದ್ರತಾ ಮಂಡಳಿ ಕಾರ್ಯದರ್ಶಿ ಸರ್ಗಿ ಶೌಗು ಸಭೆ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ದೇಶವೊಂದರ ಜತೆ ತಾಲಿಬಾನ್‌ ಮಾಡಿಕೊಂಡ ಮೊಟ್ಟಮೊದಲ ರಕ್ಷಣಾ ಒಪ್ಪಂದ ಎಂಬುದು ವಿಶೇಷ.

‘ಪಶ್ಚಿಮ ದೇಶಗಳು ತಾವು ನಿರ್ಬಂಧಿಸಿರುವ ಆಫ್ಘನ್‌ ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು. ತಾಲಿಬಾನ್‌ ಸರ್ಕಾರವನ್ನು ಮಾನ್ಯ ಮಾಡಬೇಕು ಮತ್ತು ಸಂಘರ್ಷದಿಂದ ಹಾನಿಗೊಳಗಾಗಿರುವ ದೇಶದ ಮರುನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ಭರಿಸಬೇಕು’ ಎಂದು ಶೌಗು ಆಗ್ರಹಿಸಿದ್ದಾರೆ.

ತಾಲಿಬಾನ್‌ಗೆ ರಷ್ಯಾ ಹತ್ತಿರವಾಗುತ್ತಿರುವುದೇಕೆ?

ಕಳೆದ ವರ್ಷ ರಷ್ಯಾ ಸುಪ್ರೀಂ ಕೋರ್ಟ್‌ ತಾಲಿಬಾನ್‌ ಅನ್ನು ಉಗ್ರಸಂಘಟನೆಗಳ ಪಟ್ಟಿಯಿಂದ ಕೈಬಿಟ್ಟಿತು. ನಂತರ ತಾಲಿಬಾನ್‌ ಸರ್ಕಾರವನ್ನು ಅಧಿಕೃತವೆಂದು ಮಾನ್ಯ ಮಾಡಿತು. ಇದೀಗ ಅದರ ಜತೆ ಒಪ್ಪಂದ ಮಾಡಿಕೊಂಡಿದೆ.

ತಾಲಿಬಾನ್‌ ಹಿಂದಿನಿಂದಲೂ ರಷ್ಯಾ ವೈರಿ ಅಮೆರಿಕ ಮತ್ತು ನ್ಯಾಟೊ ವಿರುದ್ಧ ಹೋರಾಟ ಮಾಡುತ್ತಾ ಬಂದಿದೆ. ಇದೀಗ ತಾಲಿಬಾನ್‌ ಮಿಲಿಟರಿಯನ್ನು ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಬಳಸಿಕೊಳ್ಳಲು ರಷ್ಯಾ ಈ ತಂತ್ರ ಹೆಣೆದಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. 2024ರಲ್ಲಿ ಉತ್ತರ ಕೊರಿಯಾ ಜತೆ ಒಪ್ಪಂದ ಮಾಡಿಕೊಂಡ ಬಳಿಕ, ಅದು ರಷ್ಯಾ ಪರ ಹೋರಾಡಲು ಸಾವಿರಾರು ಯೋಧರನ್ನು ಕಳಿಸಿದೆ ಎನ್ನಲಾಗಿತ್ತು.