ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ , ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳು​ವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದೆ

 ಕ್ಯಾಲಿಫೋರ್ನಿಯಾ: ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳು​ವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ.

ಸಮಸ್ಯೆಗಳು ಏನು?:

ಗಗನಯಾನದಿಂದ ಬಂದ ನಂತರ ಯಾತ್ರಿಕರು ತಲೆ ಸುತ್ತುವಿಕೆ, ವಾಕರಿಕೆ, ಅಸ್ಥಿರ ನಡಿಗೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುವ ಅಪಾಯವಿರುತ್ತದೆ.

ಮೂಳೆ ಸಾಂದ್ರತೆ ಇಳಿಕೆ:

ಗಗನಯಾನಿಗಳ ಸ್ನಾಯುಗಳಲ್ಲಿ ಜೀವಕೋ​ಶಗಳ ನಷ್ಟವಾಗುತ್ತದೆ. ಅಂತೆಯೇ, ಬೆನ್ನು, ಸೊಂಟ, ತೊಡೆ ಎಲುಬುಗಳ ಶೇ.1ರಷ್ಟು ಸಾಂದ್ರತೆ ಕಡಿಮೆಯಾಗುತ್ತದೆ. ಗುರುತ್ವಾಕರ್ಷ​ಣೆ ಕೊರತೆಯಿಂದ ದೇಹದ ದ್ರವಗಳು ಗಗನ​ಯಾತ್ರಿಗಳ ತಲೆ ಭಾಗದಲ್ಲಿ ಶೇಖರಣೆ​ಯಾಗಿ ಅದು ಊದಿ​ಕೊಂಡಿರುವ ಸಾಧ್ಯತೆ ಇರುತ್ತದೆ. ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆ​ಯಿಂದಾಗಿ ಕಾಲುಗಳು ಕೃಶ ಮತ್ತು ಬಲಹೀನವಾಗಿರುತ್ತವೆ. ಜೊತೆಗೆ, ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದುವಾಗುತ್ತದೆ. ಪರಿಣಾ​ಮ​ವಾಗಿ ಭೂಮಿಗೆ ಮರಳುತ್ತಿ ದ್ದಂತೆ ಗಗನಯಾತ್ರಿಗಳು ನಡೆಯಲು ಕಷ್ಟಪಡುವಂತಾಗುತ್ತದೆ.

ಎತ್ತರದಲ್ಲಿ ಹೆಚ್ಚಳ:

ಬಾಹ್ಯಾಕಾಶದಲ್ಲಿ ಯಾನಿಗಳ ಬೆನ್ನುಮೂಳೆ ಕೆಲ ಇಂಚು ಬೆಳವಣಿಗೆ ಕಾಣುವ ಕಾರಣ ದೇಹದ ಎತ್ತರ ದಲ್ಲೂ ಹೆಚ್ಚಳವಾಗಿರುತ್ತದೆ. ಆದರೆ ಭೂ ಮಿಗೆ ಮರಳುತ್ತಿದ್ದಂತೆ ಅದು ಮೊದಲಿನಷ್ಟಾಗುವುದು. ಆಗ ತೀವ್ರ ಬೆನ್ನು ನೋವಿನಂತಹ ಸಮಸ್ಯೆ ಎದುರಾಗುವುದು.

ಹೃದಯದ ಮೇಲೂ ಪರಿಣಾಮ:

ಆಗಸದಲ್ಲಿ ಗುರುತ್ವಾಕರ್ಷಣೆ ಬಲ ಇರದ ಕಾರಣ ರಕ್ತ ಪರಿಚಲನೆಯಲ್ಲೂ ಸಮಸ್ಯೆ ಆಗಿರುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಕ್ಷೀಣಿಸಿ, ರಕ್ತನಾಳದ ಸಮಸ್ಯೆಯೂ ಕಂಡುಬರುತ್ತದೆ.

ದೀರ್ಘಾವಧಿ ಸವಾಲುಗಳೇನು?:

ಬಾಹ್ಯಾಕಾಶದ ವಿಕಿರಣಗಳಿಗೆ ಕೆಲಕಾಲ ಒಡ್ಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಕುಂಠಿತ ಆಗಿರುವ ಆತಂಕ ಇರುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಅಂಗಾಂಶಗಳಿಗೂ ಹಾನಿಯಾಗಿ, ದೈಹಿಕ ನಿಯಂತ್ರಣ ಕುಂದುವುದು. ಅಂಗಾಂಗಗಳ ಸಮನ್ವಯ ಕೊರತೆ ಉಂಟಾಗುತ್ತದೆ.

ಮಾನಸಿಕ ಸವಾಲುಗಳೇನು?:

ಹಲವು ದಿನ ಕಾಲ ಒಂದೇ ಸಣ್ಣ ಜಾಗದಲ್ಲೇ ಇರುವ ಕಾರಣ ಗಗನಯಾತ್ರಿಗಳಿಗೆ ಸಮಾಜದೊಂದಿಗಿನ ಸಂಪರ್ಕ ಕಡಿದು ಕೊಂಡಂತೆ ಭಾಸವಾಗುತ್ತಿರುತ್ತದೆ. ಇದರಿಂದಾಗಿ ಅವರನ್ನು ಖಿನ್ನತೆ, ಆತಂಕ, ಅರಿವಿನ ಕೊರತೆಯಂತಹ ಸಮಸ್ಯೆಕಾಡತೊಡಗುತ್ತವೆ. ಪರಿಣಾಮವಾಗಿ ಅವರ ಸಹನಾಶಕ್ತಿ, ಚುರುಕುತನ ಇಳಿಕೆಯಾಗಿ, ನಿರ್ಯಣಯಿಸುವ ಶಕ್ತಿ,ಪ್ರತಿಕ್ರಿಯಿಸುವ ಸಮಯ ಕುಂದುತ್ತದೆ.