ಅನಿರೀಕ್ಷಿತ ವಿದ್ಯುತ್‌ ಕಡಿತದಿಂದಾಗಿ ಕಂಗಾಲಾಗಿದ್ದ ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರಗಳಾದ ಸ್ಪೇನ್‌ ಮತ್ತು ಪೋರ್ಚುಗಲ್‌ನಲ್ಲಿ ಮಂಗಳವಾರದ ಬೆಳಗ್ಗಿನ ಹೊತ್ತಿಗೆ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ.

- ಸ್ಪೇನ್‌ನಲ್ಲಿ ಶೇ.99ರಷ್ಟು, ಪೋರ್ಚುಗಲ್‌ ಶೇ.89ರಷ್ಟು ಮರುಪೂರೈಕೆ

ಮ್ಯಾಡ್ರಿಡ್‌: ಅನಿರೀಕ್ಷಿತ ವಿದ್ಯುತ್‌ ಕಡಿತದಿಂದಾಗಿ ಕಂಗಾಲಾಗಿದ್ದ ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರಗಳಾದ ಸ್ಪೇನ್‌ ಮತ್ತು ಪೋರ್ಚುಗಲ್‌ನಲ್ಲಿ ಮಂಗಳವಾರದ ಬೆಳಗ್ಗಿನ ಹೊತ್ತಿಗೆ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ. ಸ್ಪೇನ್‌ನಲ್ಲಿ ಶೇ.99ರಷ್ಟು, ಪೋರ್ಚುಗಲ್‌ನಲ್ಲಿ ಶೇ.89ರಷ್ಟು ವಿದ್ಯುತ್‌ ಪೂರೈಕೆ ಸಾಧ್ಯವಾಗಿದೆ ಎಂದು ವಿತರಣಾ ಕಂಪನಿಗಳು ತಿಳಿಸಿವೆ. ಆದರೆ ಘಟನೆ ನಡೆದು 24 ಗಂಟೆ ಕಳೆದರೂ ಯಾವ ಕಾರಣಕ್ಕೆ ಸ್ಪೇನ್‌, ಪೋರ್ಚುಗಲ್‌ ಮತ್ತು ಫ್ರಾನ್ಸ್‌ನ ಕೆಲವು ಭಾಗಗಳ ಅಂದಾಜು 5 ಕೋಟಿ ಜನರಿಗೆ ವಿದ್ಯುತ್‌ ಪೂರೈಕೆ ಕಡಿತಗೊಂಡಿತ್ತು ಎಂಬುದು ಪತ್ತೆಯಾಗಿಲ್ಲ.

ಕರೆಂಟ್‌ ಶಾಕ್‌ನಿಂದ ನಿಂತುಹೋಗಿದ್ದ ಎಟಿಎಂ, ಮೆಟ್ರೋ ಸೇವೆ, ಟ್ರಾಫಿಕ್ ಸಿಗ್ನಲ್‌, ಮೊಬೈಲ್‌ ಟವರ್‌, ಶಾಲೆಗಳು, ಸಾರ್ವಜನಿಕ ಸಾರಿಗೆ ಎಂದಿನಂತೆ ಕಾರ್ಯಾರಂಭ ಮಾಡಿವೆ.

ಯೂರೋಪ್‌ನಲ್ಲಿ ಅತಿ ದೊಡ್ಡ ವಿದ್ಯುತ್‌ ಪ್ರಮಾದ ಎಂದು ಹೇಳಲಾಗುತ್ತಿರುವ ಇದು ಯಾವುದೇ ಸೈಬರ್‌ ದಾಳಿ, ಹವಾಮಾನ ಬದಲಾವಣೆ, ಅಸಹಜ ಪ್ರಕ್ರಿಯೆಯಿಂದ ನಡೆದಿಲ್ಲ ಎಂದು ಸರ್ಕಾರ ತಿಳಿಸಿವೆ. ಇದರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.