ದ್ವೀಪರಾಷ್ಟ್ರ ಲಂಕಾ ಸಂಸತ್‌ ಎಲೆಕ್ಷನ್‌: ಅಧ್ಯಕ್ಷ ಅನುರಾ ಪಕ್ಷಕ್ಕೆ ದಾಖಲೆಯ ಗೆಲುವು

| Published : Nov 16 2024, 12:34 AM IST / Updated: Nov 16 2024, 04:05 AM IST

ಸಾರಾಂಶ

ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್‌ ಚುನಾವಣೆಯಲ್ಲಿ ಅಧ್ಯಕ್ಷ ಅನುರಾ ಕುಮಾರ್ ಡಿಸ್ಸಾನಾಯಕೆ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಮೂರನೇ ಎರಡರಷ್ಟು ಬಹುಮತ ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.

ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಸಂಸತ್‌ ಚುನಾವಣೆಯಲ್ಲಿ ಅಧ್ಯಕ್ಷ ಅನುರಾ ಕುಮಾರ್ ಡಿಸ್ಸಾನಾಯಕೆ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಮೂರನೇ ಎರಡರಷ್ಟು ಬಹುಮತ ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.

 1978ರಲ್ಲಿ ದೇಶದಲ್ಲಿ ಪರಿಚಯಿಸಲಾದ ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆ ಅಡಿಯಲ್ಲಿ ಪಕ್ಷವೊಂದು ಮೂರನೇ ಎರಡರಷ್ಟು ಬಹುಮತ ಪಡೆದಿದ್ದು ಇದೇ ಮೊದಲು. 

ಗುರುವಾರ 225 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆದಿದ್ದು, ಎನ್‌ಪಿಪಿ ಮೈತ್ರಿಕೂಟ 159 ಸ್ಥಾನಗಳಲ್ಲಿ ಜಯಗಳಿಸಿದೆ. ಸಜಿತ್ ಪ್ರೇಮದಾಸ ನೇತೃತ್ವದ ಶ್ರೀಲಂಕಾದ ಸಮಗಿ ಜನ ಬಲವೇಗಯ ಪಕ್ಷ 40 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 2022 ಆರ್ಥಿಕ ಬಿಕ್ಕಟ್ಟಿನ ನಂತರ ನಡೆದ ಮೊದಲ ಸಂಸತ್‌ ಚುನಾವಣೆ ಇದಾಗಿದೆ.

ದೀಪಾವಳಿಗೆ ಮಾಂಸಹಾರಿ ಭಕ್ಷ್ಯ: ಬ್ರಿಟನ್‌ ಪ್ರಧಾನಿ ಕಚೇರಿ ಕ್ಷಮೆಯಾಚನೆ

ಲಂಡನ್‌: ಬ್ರಿಟನ್‌ನಲ್ಲಿ ಹಿಂದೂಗಳಿಗಾಗಿ ಆಯೋಜಿಸಿದ್ದ ದೀಪಾವಳಿ ಔತಣಕೂಟದಲ್ಲಿ ಮಾಂಸಹಾರಿ ಭಕ್ಷ್ಯ, ಮದ್ಯ ವಿತರಿಸಿದಪ್ರಕರಣ ಸಂಬಂಧ ಬ್ರಿಟನ್‌ ಪ್ರಧಾನಿ ಕಿರ್‌ ಸ್ಟಾರ್ಮರ್‌ ಅವರ ಕಚೇರಿ ಕ್ಷಮೆ ಕೇಳಿದೆ.

 ಹೇಳಿಕೆಯಲ್ಲಿ, ಮೆನು ಬಗ್ಗೆ ನೇರವಾಗಿ ಉಲ್ಲೇಖಿಸದಿದ್ದರೂ ಇಂತಹ ಘಟನೆ ಭವಿಷ್ಯದಲ್ಲಿ ಮತ್ತೆ ಮರುಕಳಿಸುವುದಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿದೆ.

 ‘ಬ್ರಿಟಿಷ್‌ ಹಿಂದೂ, ಸಿಖ್‌, ಜೈನ ಸಮುದಾಯಗಳು ತಮ್ಮ ದೇಶಕ್ಕೆ ನೀಡಿದ ಕೊಡುಗೆಗೆ ಅವರು ಗೌರವ ಸಲ್ಲಿಸಲು ಈ ಆಯೋಜನೆ. ಆದರೆ ಆಯೋಜನೆಯಲ್ಲಿ ತಪ್ಪಾಗಿದೆ. ನಾವು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಹಾಗಾಗಿ ಸಮುದಾಯದವರಿಗೆ ಕ್ಷಮೆ ಕೇಳುತ್ತೇವೆ. ಇಂತಹ ತಪ್ಪು ಮತ್ತೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಪ್ರಾಪ್ತ ಪತ್ನಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ಕೂಡ ರೇಪ್‌: ಬಾಂಬೆ ಹೈಕೋರ್ಟ್‌

ಮುಂಬೈ: ಅಪ್ರಾಪ್ತ ಪತ್ನಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ಕೂಡಾ ಅತ್ಯಾಚಾರ ಆಗುತ್ತದೆ. ಈ ವಿಷಯದಲ್ಲಿ ಕಾನೂನಿನ ರಕ್ಷಣೆ ನೀಡಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗಪುರದ ಪೀಠ ಹೇಳಿದೆ. 

ಜೊತೆಗೆ ಪ್ರಕರಣವೊಂದರಲ್ಲಿ ಸಂತ್ರಸ್ತೆ ಹೂಡಿದ್ದ ರೇಪ್‌ ಪ್ರಕರಣ ಮಾನ್ಯ ಮಾಡಿ ವ್ಯಕ್ತಿಗೆ ಆಕೆಯ ಪತಿಗೆ 10 ವರ್ಷಗಳ ಜೈಲು ಶಿಕ್ಷೆ ಎತ್ತಿಹಿಡಿದಿದೆ. ನ್ಯಾ। ಜಿ.ಎ. ಸನಪ್‌ ಅವರ ಪೀಠ, ಮದುವೆ ಆಗಲಿ, ಇಲ್ಲ ಆಗಿಲ್ಲದೆ ಇರಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಹುಡುಗಿ ಮೇಲೆ ಲೈಂಗಿಕ ಕ್ರಿಯೆ ಅತ್ಯಾಚಾರವಾಗಿದೆ. ಒಪ್ಪಿತ ಲೈಂಗಿಕ ಕ್ರಿಯೆಗೆ ಪತ್ನಿ ಅಥವಾ ಹುಡುಗಿಯ ವಯಸ್ಸಿನಲ್ಲಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

 ವ್ಯಕ್ತಿಯೊಬ್ಬ ವಿವಾಹಕ್ಕೆ ಮೊದಲೇ ಬಾಲಕಿ ಜೊತೆ ಬಲವಂತದ ಸಂಭೋಗ ನಡೆಸಿದ್ದ. ಆಕೆ ಗರ್ಭಿಣಿಯಾದ ಬಳಿಕ ಆಕೆಯನ್ನೇ ವರಿಸಿದ್ದ. ಆದರೆ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬಾಲಕಿ ದೂರು ದಾಖಲಿಸಿದ್ದಳು.

ಹಿಂದೂಗಳ ಮೇಲೆ ದಾಳಿ ಕೇಸ್‌: ಸಿಖ್‌ ಸಹದ್ಯೋಗಿಗೆ ಕೆನಡಾ ಪೊಲೀಸ್‌ ಕ್ಲೀನ್‌ಚಿಟ್‌

ಒಟ್ಟಾವ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಇತ್ತೀಚೆಗೆ ಹಿಂದೂಗಳ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿ ವೇಳೆ, ತಾನು ಕೂಡಾ ಹಲ್ಲೆ ನಡೆಸಿದ್ದ ಸಿಖ್‌ ಪೊಲೀಸ್‌ ಅಧಿಕಾರಿ ಹರಿಂದರ್‌ ಸೋಹಿಗೆ ಕೆನಡಾ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ. 

ಘಟನೆ ನಡೆದ ದಿನ ಸೋಹಿ ಸಾಮಾನ್ಯ ಸಮವಸ್ತ್ರದಲ್ಲಿ ಬಂದು ಹಿಂದೂಗಳ ಮೇಲೆ ನಡೆಸಿದ್ದರು. ಆದರೆ ಹಿಂದೂ ಮತ್ತು ಸಿಖ್ಖರ ನಡುವೆ ನಡೆದ ಘರ್ಷಣೆಯನ್ನು ನಿಗ್ರಹಿಸಲು ಸೋಹಿ ನೆರವಾಗಿದ್ದರು. ಅವರು ಯಾವುದೇ ಹಲ್ಲೆ ನಡೆಸಿಲ್ಲ ಎಂದು ವಿಚಾರಣೆ ಬಳಿಕ ಸೋಹಿಗೆ ಕ್ಲಿನ್‌ಚಿಟ್‌ ನೀಡಲಾಗಿದೆ. ಬ್ರಾಂಪ್ಟನ್‌ ದೇಗುಲದ ಬಳಿ ಕೆಲ ಹಿಂದೂಗಳ ಮೇಲೆ ಸೋಹಿ ದೌರ್ಜನ್ಯ ನಡೆಸಿದ ವಿಡಿಯೋಗಳು ವೈರಲ್‌ ಆದ ಬಳಿಕ ಅವರನ್ನು ಅಮಾನತುಗೊಳಿಸಿ, ತನಿಖೆಗೆ ಗುರಿಪಡಿಸಲಾಗಿತ್ತು.

ಆಂಧ್ರದಲ್ಲಿ ಎಲ್ಲಾ ರಾಜ್ಯದ ಹಿರಿಯರಿಗೂ ಬಸ್‌ ದರದಲ್ಲಿ ಶೇ.25ರಷ್ಟು ರಿಯಾಯಿತಿ

ಅಮರಾವತಿ: ಎಲ್ಲಾ ರಾಜ್ಯದ ಹಿರಿಯ ನಾಗರಿಕರಿಗೆ ಬಸ್‌ ಟಿಕೆಟ್‌ ದರದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡುವುದಾಗಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಘೋಷಿಸಿದೆ. ಈ ರಿಯಾಯಿತಿ ಎಲ್ಲಾ ಬಸ್‌ಗಳಲ್ಲೂ ಅನ್ವಯವಾಗುತ್ತದೆ.

 60 ವರ್ಷ ಮೇಲ್ಪಟ್ಟರು ತಮ್ಮ ಪ್ರಯಾಣದ ವೇಳೆ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್‌ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಪಡಿತರ ಚೀಟಿಯನ್ನು ಭೌತಿಕವಾಗಿ ಅಥವಾ ಡಿಜಿಟಲ್‌ ರೂಪದಲ್ಲಿ ತೋರಿಸಿ ಶೇ.25ರಷ್ಟು ರಿಯಾಯಿತಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಆಯಾ ರಾಜ್ಯದ ನಾಗರಿಕರಿಗೆ ಮಾತ್ರ ಪ್ರಯಾಣದಲ್ಲಿ ರಿಯಾಯಿತಿ ಇದೆ.