ಭಾರತೀಯ ಮಾಧ್ಯಮಕ್ಕೆ ಸಂದರ್ಶನ ಪ್ರಶ್ನಿಸಿದ ಚೀನಾಗೆ ತೈವಾನ್‌ ಟಾಂಗ್‌

| Published : Mar 04 2024, 01:17 AM IST

ಸಾರಾಂಶ

ಭಾರತೀಯ ಮಾಧ್ಯಮಕ್ಕೆ ತೈವಾನ್‌ ವಿದೇಶಾಂಗ ಸಚಿವ ನೀಡಿದ ಸಂದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೀನಾಗೆ ತೈವಾನ್‌ ತಕ್ಕ ಪ್ರತ್ಯುತ್ತರ ನೀಡಿದ್ದು, ತೈವಾನ್‌ ಹಾಗೂ ಭಾರತ ಚೀನಾದ ಕೈಗೊಂಬೆಯಲ್ಲ ಎಂದೂ ತೀಕ್ಷ್ಣವಾಗಿ ಪ್ರತ್ಯುತ್ತರ ಕೊಟ್ಟಿದೆ.

ಬೀಜಿಂಗ್‌: ತೈವಾನ್‌ ತನ್ನ ಅವಿಭಾಜ್ಯ ಅಂಗ ಎಂದು ವಾದಿಸುತ್ತಿರುವ ಚೀನಾಗೆ ತೈವಾನ್ ನಾವು ಸ್ವತಂತ್ರ ರಾಷ್ಟ್ರವಾಗಿದ್ದು, ನಿಮ್ಮ ಕೈಗೊಂಬೆಯಲ್ಲ ಎನ್ನುವ ಮೂಲಕ ಮತ್ತೊಮ್ಮೆ ಸಡ್ಡು ಹೊಡೆದಿದೆ. ಭಾರತೀಯ ಮಾಧ್ಯಮದ ಜೊತೆ ತೈವಾನ್‌ ಅಧಿಕಾರಿಯೊಬ್ಬರು ಸಂದರ್ಶನ ನೀಡಿ ಅದರಲ್ಲಿ ತೈವಾನ್ ಸ್ವಾತಂತ್ರ್ಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೈವಾನ್‌ ಈ ರೀತಿಯಲ್ಲಿ ತಿರುಗೇಟು ನೀಡಿದೆ. ಫೆ.29ರಂದು ಭಾರತೀಯ ಮಾಧ್ಯಮವೊಂದರ ಜೊತೆ ತೈವಾನ್‌ ವಿದೇಶಾಂಗ ಮಂತ್ರಿ ಜೋಸೆಫ್‌ ವು ಅವರು ನೀಡಿದ ಸಂದರ್ಶನದಲ್ಲಿ ತೈವಾನ್‌ ಸ್ವತಂತ್ರ ರಾಷ್ಟ್ರ ಎಂದು ತಮಗೆ ಮುಕ್ತವಾಗಿ ತಿಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚೀನಾ ತೈವಾನ್‌ಗೆ ಪತ್ರ ಬರೆದಿದ್ದು ಅದರಲ್ಲಿ ಏಕ-ಚೀನಾ ನೀತಿಗೆ ತೈವಾನ್‌ ಮಂತ್ರಿಯ ಹೇಳಿಕೆಯಿಂದ ಧಕ್ಕೆಯಾಗಿದ್ದು, ನಿಮ್ಮ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಏಕ ಚೀನಾ ನೀತಿಯಡಿಯಲ್ಲಿ ಚೀನಾದಲ್ಲಿ ರಿಪಬ್ಲಿಕ್‌ ಸರ್ಕಾರದ ಅಡಿಯಲ್ಲೇ ತೈವಾನ್‌ ಕೂಡ ಸೇರಿದೆ ಎಂಬುದಾಗಿ ಉಲ್ಲೇಖಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ ತೈವಾನ್‌, ‘ಭಾರತ ಅಥವಾ ತೈವಾನ್‌ ಚೀನಾದ ಭಾಗವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ನಾವು ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ನಿಮ್ಮ ಕೈಗೊಂಬೆಯಲ್ಲ. ನೀವು ನಿಮ್ಮ ಆರ್ಥಿಕ ಹಿಂಜರಿತದ ಕುರಿತು ಚಿಂತಿಸಬೇಕೆ ಹೊರತು ನಿಮ್ಮ ನೆರೆ ರಾಷ್ಟ್ರಗಳ ಕುರಿತಲ್ಲ’ ಎಂದು ತಕ್ಕ ತಿರುಗೇಟು ನೀಡಿದೆ.