ಸ್ತ್ರೀಯರ ಜೋರು ದನಿಗೂ ತಾಲಿಬಾನ್‌ ಉಗ್ರರ ನಿರ್ಬಂಧ!

| Published : Oct 31 2024, 12:48 AM IST / Updated: Oct 31 2024, 12:49 AM IST

ಸಾರಾಂಶ

ಮಹಿಳೆಯರ ಸ್ವಾತಂತ್ರ್ಯಕ್ಕೆ ಮತ್ತಷ್ಟು ನಿರ್ಬಂಧ ಹೇರಿರುವ ತಾಲಿಬಾನ್‌, ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಜೋರು ಧ್ವನಿಯಲ್ಲಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಕಾಬೂಲ್‌: ಮಹಿಳೆಯರ ಸ್ವಾತಂತ್ರ್ಯಕ್ಕೆ ಮತ್ತಷ್ಟು ನಿರ್ಬಂಧ ಹೇರಿರುವ ತಾಲಿಬಾನ್‌, ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಜೋರು ಧ್ವನಿಯಲ್ಲಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

‘ಸದ್ಗುಣಗಳ ಮೈಗೂಡಿಸಿಕೊಳ್ಳುವಿಕೆ ಹಾಗೂ ದುಷ್ಕೃತ್ಯಗಳ ತಡೆ’ಗಾಗಿ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಈ ಆದೇಶ ಹೊರಡಿಸಿದ್ದಾರೆ’ ಎಂದು ಆಫ್ಘನ್‌ ಮಾಧ್ಯಮಗಳು ವರದಿ ಮಾಡಿವೆ.

‘ಮಹಿಳೆಯ ಧ್ವನಿಯನ್ನು ‘ಅವ್ರಾ’ (ಮರೆಮಾಚುವಿಕೆ) ಎಂದು ಪರಿಗಣಿಸಲಾಗುತ್ತದೆ. ಅಂದರೆ ಅದನ್ನು ಖಾಸಗಿ ಅಂಗ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಗತ್ಯವಿಲ್ಲದ ಹೊರತೂ ಅದು ಇತರರಿಗೆ ಸಾರ್ವಜನಿಕವಾಗಿ ಕೇಳಿಸಬಾರದು ಎಂದರ್ಥ’ ಎಂದು ಹನಾಫಿ ಈ ನಿರ್ಬಂಧವನ್ನು ಸಮರ್ಥಿಸಿದ್ದಾರೆ.

ಈ ನಡುವೆ ಮೇಲ್ನೋಟಕ್ಕೆ ಇದು ಪ್ರಾರ್ಥನೆಗೆ ಸೀಮಿತವಾಗಿದ್ದರೂ, ಇದನ್ನು ತಾಲಿಬಾನ್‌ ಸಾರ್ವತ್ರಿಕಗೊಳಿಸುವ ಅಪಾಯ ಇದೆ. ಹೀಗಾದಲ್ಲಿ ಮಹಿಳೆಯರು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಕಳೆದುಕೊಳ್ಳಲಿದ್ದಾರೆ. ಅವರು ಸಾರ್ವಜನಿಕ ಜೀವನದಿಂದ ದೂರ ಉಳಿಯಲಿದ್ದಾರೆ’ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರ ಮೇಲೆ ತಾಲಿಬಾನ್‌ ಹಲವು ದಬ್ಬಾಳಿಕೆ ಮಾಡಿದೆ. ಮಹಿಳೆಯರು ಶಿರವಸ್ತ್ರ (ಹಿಜಾಬ್) ಧರಿಸುವುದು, ಮುಖ ಸೇರಿ ಸಂಪೂರ್ಣ ದೇಹ ಮುಚ್ಚುವ ಬಟ್ಟೆ (ಬುರ್ಖಾ) ಧರಿಸುವುದು, ಜೋರು ಧ್ವನಿಯಲ್ಲಿ ಸಂಗೀತ ಹಾಕಿ ಪುರುಷರು-ಮಹಿಳೆಯರು ಬೆರೆಯುವುದು.. ಇದರಲ್ಲಿ ಪ್ರಮುಖವಾದುದು.

ಅಲ್ಲದೆ, ಸಂಬಂಧ ಪಡದ ಮಹಿಳೆಯರನ್ನು ಮುಸ್ಲಿಂ ಪುರುಷರು ನೋಡುವುದು ಹಾಗೂ ಸಂಬಂಧಪಡದ ಪುರುಷರನ್ನು ಮುಸ್ಲಿಂ ಮಹಿಳೆಯರು ನೋಡುವುದನ್ನೂ ನಿರ್ಬಂಧಿಸಲಾಗಿದೆ. ಇದನ್ನು ‘ಹರಾಂ’ ಎಂದು ಕರೆಯಲಾಗಿದ್ದು, ಇದರ ಜಾರಿಯ ಮೇಲುಸ್ತುವಾರಿಯನ್ನು ಓಂಬುಡ್ಸ್‌ಮನ್‌ಗಳಿಗೆ ವಹಿಸಲಾಗಿದೆ.