ಸಾರಾಂಶ
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಹಾಗೂ ಭಾರತದ ರಾಜತಾಂತ್ರಿಕರ ಮೇಲೆ ಕೆನಡಾ ಕೈಗೊಂಡ ದ್ವೇಷದ ಕ್ರಮಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಕಠೋರ ಶಬ್ದಗಳಲ್ಲಿ ಖಂಡಿಸಿದ್ದು, ‘ಇದು ಹೇಡಿತನದ ಕೃತ್ಯ’ ಎಂದಿದ್ದಾರೆ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆನಡಾ ಜತೆಗಿನ ವಿವಾದ ಭುಗಿಲೆದ್ದ ಬಳಿಕ ಪ್ರಧಾನಿ ಮೋದಿ ಅವರು ನೀಡಿದ ಮೊದಲ ಹೇಳಿಕೆ ಇದಾಗಿದೆ.
ನವದೆಹಲಿ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಹಾಗೂ ಭಾರತದ ರಾಜತಾಂತ್ರಿಕರ ಮೇಲೆ ಕೆನಡಾ ಕೈಗೊಂಡ ದ್ವೇಷದ ಕ್ರಮಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಕಠೋರ ಶಬ್ದಗಳಲ್ಲಿ ಖಂಡಿಸಿದ್ದು, ‘ಇದು ಹೇಡಿತನದ ಕೃತ್ಯ’ ಎಂದಿದ್ದಾರೆ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆನಡಾ ಜತೆಗಿನ ವಿವಾದ ಭುಗಿಲೆದ್ದ ಬಳಿಕ ಪ್ರಧಾನಿ ಮೋದಿ ಅವರು ನೀಡಿದ ಮೊದಲ ಹೇಳಿಕೆ ಇದಾಗಿದೆ.
ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ಅವರು, ‘ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ಉದ್ದೇಶಪೂರ್ವಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿವೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರವು ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದಿದ್ದಾರೆ.ವಿದೇಶಾಂಗ ಇಲಾಖೆ ಖಂಡನೆ:
ಈ ನಡುವೆ, ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರವನ್ನು ಭಾರತ ಖಂಡಿಸುತ್ತದೆ. ಕೆನಡಾ ತನ್ನಲ್ಲಿನ ಎಲ್ಲಾ ಪೂಜಾ ಸ್ಥಳಗಳಿಗೆ ರಕ್ಷಣೆ ನೀಡಬೇಕು ಹಾಗೂ ಹಿಂಸಾಕೋರರ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.‘ಕೆನಡಾದಲ್ಲಿನ ಭಾರತೀಯರ ಸುರಕ್ಷತೆ ಬಗ್ಗೆ ಭಾರತ ಸರ್ಕಾರಕ್ಕೆ ಕಳವಳವಿದೆ. ಅಲ್ಲಿನ ಭಾರತೀಯ ದೂತಾವಾಸ ಅಧಿಕಾರಿಗಳು ಯಾವುದೇ ಬೆದರಿಕೆ, ಕಿರುಕುಳ, ಹಿಂಸೆಗೆ ಬಗ್ಗದೇ ನಮ್ಮವರಿಗೆ ಕಾನ್ಸುಲರ್ ಸೇವೆ ಒದಗಿಸಲಿದ್ದಾರೆ’ ಎಂದರು.ದಾಳಿಯನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ಕೂಡ ಕಟುನುಡಿಗಳಲ್ಲಿ ಖಂಡಿಸಿದೆ. ‘ಹಿಂದೂಗಳ ಸಭೆಗೆ ಭಾರತ ವಿರೋಧಿ ಶಕ್ತಿಗಳು ಹಿಂಸಾತ್ಮಕ ರೀತಿಯಲ್ಲಿ ಅಡ್ಡಿಪಡಿಸಿದ್ದು ನಾವು ನೋಡಿದ್ದೇವೆ. ಇಂಥ ಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದ ಭಾರತೀಯ ನಾಗರಿಕರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿದೆ. ಇದು ಖಂಡನಾರ್ಹ’ ಎಂದು ಹೇಳಿದೆ.