ಸಾರಾಂಶ
ನ್ಯೂಯಾರ್ಕ್: ಈಗಾಗಲೇ ಹಲವು ದೇಶಗಳ ಮೇಲೆ ಭಾರೀ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಏ.2ರಿಂದ ಪ್ರತಿತೆರಿಗೆ ಹೇರುವ ಬೆದರಿಕೆಯನ್ನು ಪುನರುಚ್ಚರಿಸಿದ್ದಾರೆ.
ಬ್ರೀಟ್ಬಾರ್ಟ್ ನ್ಯೂಸ್ ಜತೆ ನಡೆದ ಸಂದರ್ಶನದಲ್ಲಿ ಭಾರತ ಹಾಗೂ ಅಮೆರಿಕದ ಸಂಬಂಧದ ಬಗ್ಗೆ ಮಾತನಾಡಿದ ಟ್ರಂಪ್, ‘ಉಭಯ ದೇಶಗಳ ನಡುವೆ ಉತ್ತಮ ಸಂಬಂಧವಿದೆ. ಆದರೆ ಅವರು ಅತಿ ಹೆಚ್ಚು ತೆರಿಗೆ ವಿಧಿಸುತ್ತಾರೆ ಎಂಬುದೇ ಸಮಸ್ಯೆ. ಅಮೆರಿಕದ ಸರಕುಗಳ ಮೇಲೆ ಹೇರಲಾಗುವ ತೆರಿಗೆಯನ್ನು ಭಾರತ ಕಡಿಮೆ ಮಾಡಲಿದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಇದೇ ವೇಳೆ, ‘ಭಾರತ ತೆರಿಗೆ ಕಡಿತ ಮಾಡಿದ ಬಳಿಕವೂ ಅವರು ನಮ್ಮ ವಸ್ತುಗಳ ಮೇಲೆ ಎಷ್ಟು ತೆರಿಗೆ ಹಾಕುತ್ತಾರೋ ನಾವೂ ಅಷ್ಟೇ ಪ್ರತಿತೆರಿಗೆ ಹಾಕುತ್ತೇವೆ’ ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಟ್ರಂಪ್, ಭಾರತ ನಮ್ಮ ಮೇಲಿನ ತೆರಿಗೆಯನ್ನು ಇಳಿಸಲು ಒಪ್ಪಿಕೊಂಡಿದೆ ಎಂದಿದ್ದರು. ಆದರೆ ಇದನ್ನು ಭಾರತದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಭರ್ತವಾಲ್ ತಿರಸ್ಕರಿಸಿದ್ದರು.
ಅಪ್ರಾಪ್ತರಿಂದ ವಾಹನ ಚಾಲನೆ ಅಪಘಾತ: ಕರ್ನಾಟಕ ನಂ.6
ನವದೆಹಲಿ: ದೇಶದಲ್ಲಿ ಅಪ್ರಾಪ್ತರ ವಾಹನ ಚಾಲನೆಯಿಂದ ಸಂಭವಿಸುವ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು 2023-24ರಲ್ಲಿ ನಿತ್ಯ 16 ಅಪಘಾತಗಳು ಸಂಭವಿಸಿದೆ. ವರ್ಷದ ಅವಧಿಯಲ್ಲಿ 751 ಅಪಘಾತಗಳೊಂದಿಗೆ ಕರ್ನಾಟಕ ದೇಶದಲ್ಲೇ 6ನೇ ಸ್ಥಾನದಲ್ಲಿದೆ ಎಂದು ವರದಿಯೊಂದುತಿಳಿಸಿದೆ.ಈ ಕುರಿತ ಮಾಹಿತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯಸಭೆಗೆ ನೀಡಿದೆ.ವರದಿ ಅನ್ವಯ ರಾಜ್ಯವಾರು ಲೆಕ್ಕಾಚಾರದಲ್ಲಿ ತಮಿಳುನಾಡಿನಲ್ಲಿ 2023-24 ಅವಧಿಯಲ್ಲಿ 2,063 ಅಪಘಾತಗಳು ಸಂಭವಿಸಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (1,138), ಮಹಾರಾಷ್ಟ್ರ(1,067), ಉತ್ತರಪ್ರದೇಶ (935), ಆಂಧ್ರಪ್ರದೇಶ (766) ಇವೆ.
ಸಂತುಷ್ಟ ದೇಶಗಳಲ್ಲಿ ಭಾರತ ನಂ.118: ಫಿನ್ಲೆಂಡ್ ನಂ.1ವಾಷಿಂಗ್ಟನ್: ವಿಶ್ವದ ಸಂತುಷ್ಟ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತಕ್ಕೆ 118ನೇ ಸ್ಥಾನ ಲಭಿಸಿದೆ. ಕಳೆದ ವರ್ಷ 126ನೇ ಸ್ಥಾನದಲ್ಲಿದ್ದ ದೇಶ 62 ಸ್ಥಾನ ಏರಿಕೆ ಕಂಡಿದೆ. ಯೋಗಕ್ಷೇಮ ಸಂಶೋಧನಾ ಕೇಂದ್ರ ಬಿಡುಗಡೆ ಮಾಡಿದ ವಿಶ್ವ ಸಂತೋಷ ಸೂಚ್ಯಂಕ ಪಟ್ಟಿಯಲ್ಲಿ ಫಿನ್ಲೆಂಡ್ ಸತತ 8ನೇ ವರ್ಷವೂ ಅಗ್ರಸ್ಥಾನ ಕಾಯ್ದಿರಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ಐಸ್‌ಲೆಂಡ್, ಸ್ವೀಡನ್ ಇವೆ.ಅತ್ತ ತಾಲಿಬಾನಿಗಳ ಆಳ್ವಿಕೆಗೆ ಒಳಪಟ್ಟಿರುವ ಆಫ್ಘಾನಿಸ್ತಾನ ಈ ಬಾರಿಯೂ ಕೊನೆಯ(147ನೇ) ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಲೆಬನಾನ್ 142 ಮತ್ತು ಲೆಸೊಥೊ141ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆಭಾರತದ ನೆರೆಯ ದೇಶಗಳಾದ ನೇಪಾಳ 92 ಮತ್ತು ಪಾಕಿಸ್ತಾನ 109ನೇ ಸ್ಥಾನದಲ್ಲಿದ್ದು, ಭಾರತಕ್ಕಿಂತ ಮುಂದಿವೆ. ಉಳಿದಂತೆ ಶ್ರೀಲಂಕಾ 133 ಹಾಗೂ ಬಾಂಗ್ಲಾದೇಶ 134ನೇ ಸ್ಥಾನದಲ್ಲಿವೆ.
ದಾನ, ಸ್ವಯಂಸೇವೆ ಮತ್ತು ಅಪರಿಚಿತರಿಗೆ ಸಹಾಯ ಮಾಡುವ ಗುಣಗಳನ್ನು ಪ್ರಮುಖವಾಗಿಟ್ಟುಕೊಂಡು ಯೋಗಕ್ಷೇಮ ಸಂಶೋಧನಾ ಕೇಂದ್ರವು ವಿಶ್ವ ಸಂತೋಷ ಸೂಚ್ಯಂಕ ಪಟ್ಟಿ ತಯಾರಿಸಿದೆ.
ದೆಹಲಿ, ಕೋಲ್ಕತಾದಲ್ಲೂ ಇತ್ತು ಅಮೆರಿಕ ಗುಪ್ತಚರ ಸಿಐಎ ಕೇಂದ್ರಕೋಲ್ಕತಾ: 1963ರಲ್ಲಿ ಅಮೆರಿಕ ಅಧ್ಯಕ್ಷ ಜಾನ್ ಎಫ್.ಕೆನಡಿ ಹತ್ಯೆ ಕುರಿತು ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ ರಹಸ್ಯ ಪತ್ರಗಳು, ಭಾರತದ ನವದೆಹಲಿ ಮತ್ತು ಕೋಲ್ಕತಾದಲ್ಲೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ರಹಸ್ಯ ಕೇಂದ್ರಗಳನ್ನು ಹೊಂದಿತ್ತು ಎಂಬ ಮಾಹಿತಿ ಹೊರಚೆಲ್ಲಿವೆ.ಅಮೆರಿಕದ ನ್ಯಾಷನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್‌ನಿಂದ ಬಿಡುಗಡೆಗೊಂಡ ದಾಖಲೆಗಳು ಭಾರತ ಮತ್ತು ವಿಶ್ವಾದ್ಯಂತ ಇತರೆ ದೇಶಗಳಲ್ಲಿ ಸಿಐಎ ನಡೆಸಿದ ರಹಸ್ಯ ಕಾರ್ಯಾಚರಣೆಗಳ ಕುರಿತು ಬೆಳಕು ಚೆಲ್ಲಿದೆ.ಸಾರ್ವಜನಿಕಗೊಂಡ ಈ ದಾಖಲೆಗಳ ಪ್ರಕಾರ, ಸಿಐಎನ ನ್ಯೂಯಾರ್ಕ್ ವಿಭಾಗವು ನವದೆಹಲಿ, ಕೋಲ್ಕತಾ ಮತ್ತು ಪಾಕಿಸ್ತಾನದ ರಾವಲ್ಪಿಂಡಿ, ಶ್ರೀಲಂಕಾದ ಕೊಲಂಬೋ, ಇರಾನ್ ಟೆಹರಾನ್ ಮತ್ತಿತರ ಕಡೆಯ ಕೇಂದ್ರಗಳನ್ನು ನೋಡಿಕೊಳ್ಳುತ್ತಿತ್ತು. ಇವುಗಳಲ್ಲಿ ಕೆಲ ಕೇಂದ್ರಗಳಲ್ಲಿ ಕೆಲವರನ್ನು ಯಾವುದೇ ದೋಷಾರೋಪಣೆ, ಅಧಿಕೃತ ಆರೋಪಗಳಿಲ್ಲದೆಯೇ ವಶದಲ್ಲಿಟ್ಟುಕೊಳ್ಳಲಾಗುತ್ತಿತ್ತು.ಸಿಐಎಯ ರಹಸ್ಯ ಕೇಂದ್ರಗಳನ್ನು ಬ್ಲ್ಯಾಕ್ ಸೈಟ್ಸ್ ಎಂದು ಕರೆಯಲಾಗುತ್ತಿತ್ತು. ಚೀನಾ ವಿರುದ್ಧವೂ ಬೇಹುಗಾರಿಕೆಗೂ ಸಿಐಎ ಭಾರತಕ್ಕೆ ನೆರವು ನೀಡುತ್ತಿತ್ತು. ಟಿಬೆಟ್‌ನಿಂದ ದಲೈ ಲಾಮಾ ಅವರು ಭಾರತಕ್ಕೆ ಪರಾರಿಯಾಗಲು ಸಿಐಎ ನೆರವು ನೀಡಿತ್ತು.