ಸಂಘರ್ಷಪೀಡಿತ ಗಾಜಾ ಮರು ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಗಾಜಾ ಬೋರ್ಡ್ ಆಫ್‌ ಪೀಸ್‌ಗೆ ( ಗಾಜಾ ಶಾಂತಿ ಮಂಡಳಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಚಾಲನೆ ನೀಡಿದ್ದಾರೆ.

ದಾವೋಸ್‌ (ಸ್ವಿಜರ್ಲೆಂಡ್): ಸಂಘರ್ಷಪೀಡಿತ ಗಾಜಾ ಮರು ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಗಾಜಾ ಬೋರ್ಡ್ ಆಫ್‌ ಪೀಸ್‌ಗೆ (ಗಾಜಾ ಶಾಂತಿ ಮಂಡಳಿ) ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಚಾಲನೆ ನೀಡಿದ್ದಾರೆ. ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಜಾಗತಿಕವಾಗಿ ಇದ್ದರೂ ಅದಕ್ಕೆ ಪರ್ಯಾಯವಾಗಿ ಟ್ರಂಪ್‌ ‘ಮಿನಿ ವಿಶ್ವಸಂಸ್ಥೆ’ಗೆ ಚಾಲನೆ ನೀಡಿದ್ದು ಗಮನಾರ್ಹ.

ಇದೇ ವೇಳೆ ಮಾತನಾಡಿದ ಟ್ರಂಪ್‌, ‘ಒಂದು ವೇಳೆ ಹಮಾಸ್‌ ಶಸ್ತ್ರತ್ಯಾಗ ಮಾಡದಿದ್ದರೆ ಅವರನ್ನು ನಿರ್ನಾಮ ಮಾಡುತ್ತೇವೆ’ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ದಾವೋಸ್‌ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ಶೃಂಗದ ವೇಳೆ ಹಲವು ದೇಶಗಳ ಮುಖ್ಯಸ್ಥರ ಸಮ್ಮುಖದಲ್ಲಿ ಶಾಂತಿ ಮಂಡಳಿಯನ್ನು ಟ್ರಂಪ್‌ ಅಧಿಕೃತವಾಗಿ ಪ್ರಕಟಿಸಿದರು. ಇದರಲ್ಲಿ ಇಸ್ರೇಲ್‌ ವಿರೋಧದ ನಡುವೆಯೂ ಪಾಕಿಸ್ತಾನ ಸೇರಿ 35 ದೇಶಗಳು ಸ್ಥಾನ ಪಡೆದಿವೆ. ಆದರೆ ಭಾರತ, ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳಿಗೆ ಮಂಡಳಿ ಸೇರಲು ಆಹ್ವಾನ ಇದ್ದರೂ, ಸೇರ್ಪಡೆಗೆ ನಿರುತ್ಸಾಹ ತೋರಿವೆ.

ಶಾಂತಿ ಮಂಡಳಿ ಘೋಷಣೆ ಬಳಿಕ ಮಾತನಾಡಿದ ಟ್ರಂಪ್‌, ‘ಹಮಾಸ್‌ ಶಸ್ತ್ರತ್ಯಾಗ ಮಾಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಶಾಂತಿ ಮಂಡಳಿಯಲ್ಲಿ ಹಲವು ದೇಶಗಳು ಪಾಲ್ಗೊಳ್ಳುತ್ತಿವೆ. ಇನ್ನೂ ಹಲವು ದೇಶಗಳು ಈ ಮಂಡಳಿಯ ಭಾಗವಾಗಲು ಬಯಸುತ್ತಿವೆ. ಈ ಮಂಡಳಿ ವಿಶ್ವಸಂಸ್ಥೆ ಜತೆಗೂ ಕೆಲಸ ಮಾಡಲಿದೆ’ ಎಂದು ಸ್ಪಷ್ಟಪಡಿಸಿದರು

ಇದೇ ವೇಳೆ, ‘ರಷ್ಯಾ-ಉಕ್ರೇನ್ ಕೂಡ ಸಮರ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಶೀಘ್ರ ಉಕ್ರೇನ್‌ ಅಧ್ಯಕ್ಷ ಜೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಜತೆ ಮಾತುಕತೆ ನಡೆಸುವ ವಿಶ್ವಾಸವಿದೆ’ ಎಂದರು.

ಮಿನಿ ವಿಶ್ವಸಂಸ್ಥೆ ಹೇಗೆ?:

ಗಾಜಾದಲ್ಲಿ ಶಾಂತಿಸ್ಥಾಪನೆಯನ್ನು ಕೇಂದ್ರೀಕರಿಸಿ ಸದ್ಯ ಈ ಮಂಡಳಿ ರಚನೆಯಾಗುತ್ತಿದ್ದರೂ ಭವಿಷ್ಯದಲ್ಲಿ ವಿಶ್ವದ ಇತರೆ ಸಂಘರ್ಷಗಳನ್ನು ತಡೆಯಲೂ ಈ ಮಂಡಳಿ ಕೆಲಸ ಮಾಡಲಿದೆ. ಮಿನಿ ವಿಶ್ವಸಂಸ್ಥೆಯೆಂದೇ ಕರೆಯಲ್ಪಡುತ್ತಿರುವ ಈ ಮಂಡಳಿಗೆ ಶಾಶ್ವತ ಸದಸ್ಯನಾಗುವ ದೇಶ 9 ಸಾವಿರ ಕೋಟಿ ರು. ಪಾವತಿಸಬೇಕಿದೆ.

ಕಾರ್ಯಕ್ರಮದಲ್ಲಿ ಈ ಮಂಡಳಿಯ ಚಾರ್ಟರ್‌ಗೆ ಟ್ರಂಪ್‌ ಅವರು ಮೊದಲು ಸಹಿಹಾಕಿದರೆ, ಆ ಬಳಿಕ ಬಹ್ರೈನ್‌, ಮೊರಕ್ಕೋ ಮತ್ತಿತರ ದೇಶಗಳ ಪ್ರಮುಖರು ತಮ್ಮ ಸಹಿ ಹಾಕಿದರು. ಈ ವೇಳೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಕೂಡ ಇದ್ದರು.

ಸದಸ್ಯ ದೇಶಗಳು:

ಯುಎಇ, ಸೌದಿ ಅರೇಬಿಯಾ, ಈಜಿಪ್ಟ್‌, ಕತಾರ್‌, ಬಹ್ರೈನ್‌, ಪಾಕಿಸ್ತಾನ, ಟರ್ಕಿ, ಹಂಗೇರಿ, ಮೊರಕ್ಕೋ, ಕೊಸಾವೋ, ಅರ್ಜೆಂಟೀನಾ, ಪರುಗ್ವೆ, ಕಝಕಿಸ್ತಾನ, ಉಜ್ಬೇಕಿಸ್ತಾನ, ಇಂಡೋನೇಷ್ಯಾ, ವಿಯೆಟ್ನಾಂ, ಅರ್ಮೇನಿಯಾ, ಅಜರ್‌ಬೈಜಾನ್‌, ಬೇಲಾರಸ್‌, ಮಂಗೋಲಿಯಾ, ಬಲ್ಗೇರಿಯಾ, ಜೋರ್ಡಾನ್‌ ಸೇರಿ 35 ದೇಶಗಳು.

ವಿರೋಧಿಸುತ್ತಿರುವ ದೇಶಗಳು:

ಫ್ರಾನ್ಸ್‌, ನಾರ್ವೆ, ಸ್ಲೋವೇನಿಯಾ, ಸ್ವೀಡನ್‌, ಬ್ರಿಟನ್‌.

ನಿರ್ಧರಿಸದ ದೇಶಗಳು:

ಕಾಂಬೋಡಿಯಾ, ಚೀನಾ, ಭಾರತ, ಕೆನಡಾ, ಜರ್ಮನಿ, ಕ್ರೊವೇಷಿಯಾ, ಇಟಲಿ, ಸಿಂಗಾಪುರ, ಥಾಯ್ಲೆಂಡ್‌, ಉಕ್ರೇನ್‌.

ಕಾಯಂ ಸದಸ್ಯತ್ವಕ್ಕೆ ₹9000 ಕೋಟಿ ದರ!

ಗಾಜಾದಲ್ಲಿ ಶಾಂತಿಸ್ಥಾಪನೆಯನ್ನು ಕೇಂದ್ರೀಕರಿಸಿ ಸದ್ಯ ಈ ಮಂಡಳಿ ರಚನೆಯಾಗುತ್ತಿದ್ದರೂ ಭವಿಷ್ಯದಲ್ಲಿ ವಿಶ್ವದ ಇತರೆ ಸಂಘರ್ಷಗಳನ್ನು ತಡೆಯಲೂ ಈ ಮಂಡಳಿ ಕೆಲಸ ಮಾಡಲಿದೆ. ಮಿನಿ ವಿಶ್ವಸಂಸ್ಥೆಯೆಂದೇ ಕರೆಯಲ್ಪಡುತ್ತಿರುವ ಈ ಮಂಡಳಿಗೆ ಶಾಶ್ವತ ಸದಸ್ಯನಾಗುವ ದೇಶ 9 ಸಾವಿರ ಕೋಟಿ ರು. ಪಾವತಿಸಬೇಕಿದೆ.

ಆಹ್ವಾನ ಬಂದರೂ ಸೇರದ ಭಾರತ

ಗಾಜಾ ಶಾಂತಿ ಮಂಡಳಿಗೆ ಸೇರುವಂತೆ ಭಾರತಕ್ಕೂ ಟ್ರಂಪ್‌ ಆಹ್ವಾನ ಕೊಟ್ಟಿದ್ದರು. ಆದರೆ ಯಾವುದೇ ನಿರ್ಧಾರವನ್ನು ಭಾರತ ಕೈಗೊಂಡಿಲ್ಲ.