ಸಾರಾಂಶ
ವಾಷಿಂಗ್ಟನ್: ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಮೇಲೆ ಮನಸೋಇಚ್ಛೆ ತೆರಿಗೆ ವಿಧಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಅಲ್ಲಿನ ಮೇಲ್ಮನವಿ ನ್ಯಾಯಾಲಯವು ಇದೀಗ ಭಾರೀ ಶಾಕ್ ನೀಡಿದೆ. ‘ಡೊನಾಲ್ಡ್ ಟ್ರಂಪ್ ಅವರ ಅನೇಕ ತೆರಿಗೆಗಳು ಅಕ್ರಮ’ ಎಂದು ಹೇಳಿದೆ, ಆದರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಕದತಟ್ಟಲು ಅ.14ರ ವರೆಗೆ ಕಾಲಾವಕಾಶ ನೀಡಿದೆ. ಅಲ್ಲಿವರೆಗೆ ಈಗಾಗಲೇ ಹೇರಿರುವ ತೆರಿಗೆ ಮೇಲೆ ಯಾವುದೇ ತಡೆ ನೀಡದಿರಲು ತನ್ನ 7-4 ಬಹುಮತದ ತೀರ್ಪಿನಲ್ಲಿ ನಿರ್ಧರಿಸಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲೂ ತೀರ್ಪು ಟ್ರಂಪ್ ವಿರುದ್ಧವಾಗಿ ಬಂದರೆ ಟ್ರಂಪ್ ಅವರಿಗೆ ಭಾರೀ ಹಿನ್ನಡೆಯಾಗಲಿದೆ. ಇದರಿಂದ ಅಮೆರಿಕ ಭಾರೀ ನಷ್ಟವನ್ನೂ ಎದುರಿಸಬೇಕಾದ ಸ್ಥಿತಿ ಎದುರಾಗಲಿದೆ ಎನ್ನಲಾಗುತ್ತಿದೆ.
ಮೇ ತಿಂಗಳಲ್ಲಿ ಟ್ರಂಪ್ ಅವರ ತೆರಿಗೆ ಕುರಿತು ವಿಚಾರಣೆ ನಡೆಸಿದ್ದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ನ್ಯಾಯಾಲಯವು, ‘ಟ್ರಂಪ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಈ ತೆರಿಗೆ ವಿಧಿಸಿದ್ದಾರೆ’ ಎಂದು ಹೇಳಿತ್ತು.
ಆದರೆ, ಈ ತೀರ್ಪಿಗೆ ಮೇಲ್ಮನವಿ ನ್ಯಾಯಾಲಯ ತಡೆ ನೀಡಿತ್ತು.ಇದೀಗ ವಿಚಾರಣೆ ಮುಂದುವರಿಸಿದ ಮೇಲ್ಮನವಿ ನ್ಯಾಯಾಲಯ, ‘ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಟ್ರಂಪ್ ಅವರಿಗೆ ಕೆಲ ನಿರ್ಧಾರ ತೆಗೆದುಕೊಳ್ಳಲು ಶಾಸನಬದ್ಧ ಅಧಿಕಾರ ಇದೆ. ಆದರೆ, ಇದ್ಯಾವುದೂ ತೆರಿಗೆ ವಿಧಿಸುವ ಅಧಿಕಾರ ನೀಡುವುದಿಲ್ಲ’ ಎಂದಿಟ್ಟಿದೆ. ಆದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಆ.14ರವರೆಗೆ ಅವಕಾಶ ನೀಡಿದೆ.
ಸುಪ್ರೀಂನಲ್ಲೂ ರದ್ದಾದರೆ? : ಭಾರತ ಸೇರಿ ವಿವಿಧ ದೇಶಗಳಿಂದ ಆಮದಾಗುತ್ತಿರುವ ಉತ್ಪನ್ನಗಳ ಮೇಲೆ ಹೇರಿರುವ ತೆರಿಗೆಯಿಂದ ಈವರೆಗೆ ಸರ್ಕಾರವು ಸರಿಸುಮಾರು 14 ಲಕ್ಷ ಕೋಟಿ ರು. ಸಂಗ್ರಹಿಸಿದೆ. ಒಂದು ವೇಳೆ ಈ ತೆರಿಗೆ ರದ್ದಾದರೆ ಅಮೆರಿಕಕ್ಕೆ ಈ ಹಣ ವಾಪಸ್ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಹಾಗೂ ಈಗಾಗಲೇ ವಿದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಮೇಲೆ ಕರಿನೆರಳು ಬೀರಬಹುದಾಗಿದೆ ಎಂದು ಹೇಳಲಾಗುತ್ತಿದೆ.
ತೆರಿಗೆ ರದ್ದಾದ್ರೆ ಅಮೆರಿಕ ಪಾಲಿಗೆ ವಿನಾಶ: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್: ‘ವಿದೇಶಿ ಉತ್ಪನ್ನಗಳ ಮೇಲೆ ಈಗಾಗಲೇ ವಿಧಿಸಿರುವ ತೆರಿಗೆ ಯಥಾರೀತಿ ಜಾರಿಯಲ್ಲಿರಲಿದೆ. ಒಂದು ವೇಳೆ ಈ ತೆರಿಗೆಗಳು ರದ್ದಾದರೆ ದೇಶದ ಪಾಲಿಗೆ ವಿನಾಶ ಸೃಷ್ಟಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮ ತೆರಿಗೆ ಆದೇಶ ಅಕ್ರಮ ಎಂದು ಕೋರ್ಟ್ ಹೇಳಿದ ಬಗ್ಗೆ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ಮೇಲ್ಮನವಿ ನ್ಯಾಯಾಲಯದ ಆದೇಶ ಸರಿಯಿಲ್ಲ. ಈ ಹೋರಾಟದಲ್ಲಿ ಅಂತಿಮವಾಗಿ ಅಮೆರಿಕವೇ ಗೆಲ್ಲಲಿದೆ ಎಂಬುದು ಅವರಿಗೂ ಗೊತ್ತಿದೆ. ಸುಪ್ರೀಂ ಕೋರ್ಟಲ್ಲಿ ಹೋರಾಡಿ ಗೆಲ್ಲುತ್ತೇವೆ. ಒಂದು ವೇಳೆ ಈ ತೆರಿಗೆ ರದ್ದಾದರೆ ದೇಶದ ಪಾಲಿಗೆ ಅದು ಮರಣಶಾಸನವಾಗಲಿದೆ. ಆರ್ಥಿಕವಾಗಿ ಅಮೆರಿಕ ದುರ್ಬಲವಾಗಲಿದೆ’ ಎಂದಿದ್ದಾರೆ.
’ತೆರಿಗೆಯು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳು ಮತ್ತು ಕಾರ್ಮಿಕರಿಗೆ ನೆರವು ನೀಡುವ ಅತ್ಯುತ್ತಮ ಸಾಧನ. ಅಮೆರಿಕನ್ನರ ಬಗ್ಗೆ ಯಾವುದೇ ಕಾಳಜಿ ಇಲ್ಲದ ಹಾಗೂ ಅವಿವೇಕಿ ರಾಜಕಾರಣಿಗಳಿಂದಾಗಿ ಹಲವು ವರ್ಷಗಳ ಕಾಲ ತೆರಿಗೆಯನ್ನು ನಮ್ಮ ವಿರುದ್ಧವಾಗಿ ಬಳಸಲಾಗುತ್ತಿತ್ತು. ಮುಮದೆ ಸುಪ್ರೀಂ ಕೋರ್ಟ್ ನಮ್ಮ ನೆರವಿಗೆ ಬರಲಿದೆ. ಆ ಮೂಲಕ ನಾವು ಅದನ್ನು ದೇಶದ ಲಾಭಕ್ಕೋಸ್ಕರ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.