ಟ್ರಂಪ್‌ ರಿಟರ್ನ್ಸ್‌!

| Published : Nov 06 2024, 11:53 PM IST

ಸಾರಾಂಶ

ಸರಿಸುಮಾರು ಎರಡೂವರೆ ಶತಮಾನದ ಅಮೆರಿಕದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (78) ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

- ಅಮೆರಿಕಕ್ಕೆ 2ನೇ ಬಾರಿ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆ

- ಭಾರತೀಯ ಮೂಲದ ಕಮಲಾಗೆ ನಿರಾಸೆ । ಈ ಸಲವೂ ಇಲ್ಲ ಮಹಿಳಾ ಅಧ್ಯಕ್ಷೆ

----

47ನೇ ಅಧ್ಯಕ್ಷರಾಗಿ ಜನವರಿಯಲ್ಲಿ ಪ್ರಮಾಣ ವಚನ

----ಒಟ್ಟು ಸ್ಥಾನ..538

ಬಹುಮತಕ್ಕೆ...270

ಡೊನಾಲ್ಡ್‌ ಟ್ರಂಪ್....280

ಕಮಲಾ ಹ್ಯಾರಿಸ್‌...224

ಎಣಿಕೆ ಬಾಕಿ...34

----

ಪಿಟಿಐ ವಾಷಿಂಗ್ಟನ್‌

ಸರಿಸುಮಾರು ಎರಡೂವರೆ ಶತಮಾನದ ಅಮೆರಿಕದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (78) ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನ.5ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿದ್ದ ಟ್ರಂಪ್‌, ತಮ್ಮ ಎದುರಾಳಿ, ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಿ ಅಮೆರಿಕದ 47ನೇ ಅಧ್ಯಕ್ಷರಾಗಿ ಜಯದ ನಗೆ ಬೀರಿದ್ದಾರೆ. ಜನವರಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಈ ಹಿಂದೆ 2017-21ರ ಅವಧಿಯಲ್ಲೂ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್‌ ಅವರ ಈಗಿನ ಗೆಲುವನ್ನು ಐತಿಹಾಸಿಕ ಪುನರಾಗಮನ ಎಂದು ಬಣ್ಣಿಸಲಾಗಿದೆ.ಇದರೊಂದಿಗೆ ಅಮೆರಿಕ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು ಮತ್ತು ಭಾರತೀಯ ಮೂಲದವರೊಬ್ಬರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದೆಡೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ, ಎರಡು ಪ್ರತ್ಯೇಕ ಅವಧಿಗೆ (ಸತತವಾಗಿ ಆಯ್ಕೆಯಾಗದ) ಆಯ್ಕೆಯಾದ ಎರಡನೇ ವ್ಯಕ್ತಿ ಎಂಬ ದಾಖಲೆ ಟ್ರಂಪ್‌ಗೆ ಒಲಿದು ಬಂದಿದೆ.ಟ್ರಂಪ್‌ಗೆ ಅಧ್ಯಕ್ಷಗಿರಿ:

ಎಲ್ಲಾ ಆರಂಭಿಕ ಹಿನ್ನಡೆಗಳನ್ನೂ ಮೆಟ್ಟಿನಿಂತ ಟ್ರಂಪ್‌, ಅತ್ಯಂತ ಹೆಚ್ಚು ಮತಗಳನ್ನು ಹೊಂದಿದ್ದ 7 ರಾಜ್ಯಗಳ ಪೈಕಿ ಎಲ್ಲಾ ರಾಜ್ಯಗಳನ್ನೂ ಗೆದ್ದು, ಉಳಿದ ಕಡೆಯೂ ಮುನ್ನಡೆ ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಗೆಲುವಿಗೆ ಅಗತ್ಯವಾಗಿದ್ದ 270 ಎಲೆಕ್ಟೋರಲ್‌ ಕಾಲೇಜ್‌ (ಜನಪ್ರತಿನಿಧಿಗಳು) ಮತಗಳ ಪೈಕಿ ಟ್ರಂಪ್‌ಗೆ 280 ಮತ ಸಿಕ್ಕರೆ, ಕಮಲಾಗೆ 224 ಮತಗಳು ಮಾತ್ರ ಲಭ್ಯವಾದವು.ಹಿನ್ನಡೆ ಮೆಟ್ಟಿನಿಂತ ಟ್ರಂಪ್‌:

ಚುನಾವಣೆ ಆರಂಭದಲ್ಲಿ ಬಹುತೇಕ ಸಮೀಕ್ಷೆಗಳು ಕಮಲಾ ಗೆಲುವಿನ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದವಾದರೂ, ಕುಸಿಯುತ್ತಿರುವ ದೇಶದ ಅರ್ಥವ್ಯವಸ್ಥೆ, ಅಕ್ರಮ ನುಸುಳುಕೋರರಿಗೆ ಡೆಮಾಕ್ರೆಟಿಕ್‌ ಅಭ್ಯರ್ಥಿ ಕಮಲಾ ಬೆಂಬಲದ ಬಗ್ಗೆ ಕಟು ಟೀಕೆ, ಅಕ್ರಮ ವಲಸಿಗರ ಗಡಿಪಾರು ಭರವಸೆ, ಸಾಮಾಜಿಕ ಭದ್ರತಾ ಆದಾಯಕ್ಕೆ ತೆರಿಗೆ ವಿನಾಯಿತಿ, ರಷ್ಯಾ- ಉಕ್ರೇನ್‌ ಯುದ್ಧಕ್ಕೆ ತೆರೆ ಎಳೆವ ಭರವಸೆ, ಎಲೆಕ್ಟ್ರಿಕ್‌ ವಾಹನಗಳಿಗೆ ನೀಡುವ ರಿಯಾಯಿತಿ ರದ್ದು ಮೊದಲಾದ ವಿಷಯಗಳನ್ನು ಪ್ರಚಾರದ ಹೊತ್ತಿನಲ್ಲಿ ಟ್ರಂಪ್‌ ಅತ್ಯಂತ ಪ್ರಬಲವಾಗಿ ಬಿಂಬಿಸಿದ್ದು ಅವರ ಗೆಲುವಿಗೆ ನೆರವಾಯಿತು ಎನ್ನಲಾಗಿದೆ.ಕೀಳು ಟೀಕೆ:

ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್‌, ತಮ್ಮ ಎದುರಾಳಿ ಕಮಲಾ ವಿರುದ್ಧ ಸ್ತ್ರೀದ್ವೇಷ, ಜನಾಂಗೀಯ ದ್ವೇಷ ಮಾತುಗಳನ್ನು ಆಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಇಂಥದ್ದೊಂದು ಟೀಕೆಯ ಮೂಲಕ ವಲಸಿಗರು ಮತ್ತು ಅಕ್ರಮ ವಲಸಿಗರನ್ನು ದ್ವೇಷಿಸುವ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದ ಟ್ರಂಪ್‌ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಫೀನಿಕ್ಸ್‌ನಂತೆ ಎದ್ದುಬಂದ ಟ್ರಂಪ್‌:

2020ರಲ್ಲಿ ಜೋ ಬೈಡೆನ್‌ ವಿರುದ್ದ ಆಘಾತಕಾರಿ ಸೋಲು ಕಂಡಿದ್ದ ಟ್ರಂಪ್‌, ಫಲಿತಾಂಶ ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಬಳಿಕ ಟ್ರಂಪ್‌ ಅಣತಿಯಂತೆ ಅವರ ಬೆಂಬಲಿಗರು ಅಮೆರಿಕದ ಸಂಸತ್‌ ಮೇಲೆ ದಾಳಿ ನಡೆಸಿ ಇತಿಹಾಸದ ಕರಾಳ ಘಟನೆಯೊಂದಕ್ಕೆ ಕಾರಣರಾಗಿದ್ದರು. ಈ ಪ್ರಕರಣದಲ್ಲಿ ಅವರನ್ನು ಘೋರ ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ಹೀಗಾಗಿ ಟ್ರಂಪ್‌ ಜೈಲು ಪಾಲಾಗುವ ಸಾಧ್ಯತೆ ದಟ್ಟವಾಗಿತ್ತು. ಮತ್ತೊಂದೆಡೆ ಶ್ವೇತಭವನದ ರಹಸ್ಯ ಕಡತಗಳನ್ನು ತಮ್ಮ ಬಂಗಲೆಗೆ ಕದ್ದೊಯ್ದ, ಸೆಕ್ಸ್‌ ಹಗರಣ ಮುಚ್ಚಿಡಲು ಹಣ ಪಾವತಿಸಿದ ಹಗರಣಗಳೂ ಅವರನ್ನು ಸುತ್ತಿಕೊಂಡಿದ್ದವು.ಹೀಗಾಗಿ ಈ ಬಾರಿ ಚುನಾವಣೆಗೆ ಅವರ ಸ್ಪರ್ಧೆಯೇ ಅನುಮಾನ ಎನ್ನುವ ಹೊತ್ತಿನಲ್ಲೇ ಅವರೀಗ ದೇಶದ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ ತಮ್ಮೆಲ್ಲಾ ಕಳಂಕ ತೊಳೆದುಕೊಳ್ಳುವ ಅವಕಾಶ ಅವರ ಕೈ ಸೇರಿದೆ. ಜೊತೆಗೆ ಸಂಸತ್‌ ಮೇಲಿನ ದಾಳಿ ಪ್ರಕರಣದಲ್ಲಿ ಜೈಲು ಪಾಲಾಗುವ ಸಾಧ್ಯತೆಯೂ ದೂರವಾಗಿದೆ.

----

ಹಲವು ಕಳಂಕಗಳ ಸರದಾರ!

- 2020ರಲ್ಲಿ ಜೋ ಬೈಡೆನ್‌ ವಿರುದ್ಧ ಸೋತಾಗ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿ ಅಮೆರಿಕದ ಸಂಸತ್‌ ಭವನದ ಮೇಲೇ ತಮ್ಮ ಬೆಂಬಲಿಗರೊಂದಿಗೆ ಟ್ರಂಪ್‌ ದಾಳಿ ನಡೆಸಿದ್ದರು. ಆ ಕೇಸಿನಲ್ಲಿ ಅವರು ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿತ್ತು.

- ಶ್ವೇತಭವನದ ರಹಸ್ಯ ಕಡತಗಳನ್ನು ಕದ್ದು ತಮ್ಮ ಬಂಗಲೆಗೆ ಒಯ್ದ ಆರೋಪ ಟ್ರಂಪ್‌ ಮೇಲಿತ್ತು.

- ಒಂದಕ್ಕಿಂತ ಹೆಚ್ಚು ಸೆಕ್ಸ್‌ ಹಗರಣಗಳಲ್ಲಿ ಟ್ರಂಪ್‌ ದೋಷಿಯಾಗಿದ್ದಾರೆ. ಈಗಲೂ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳಿವೆ.