ಬಿಜೆಪಿ, ಮೋದಿ ಹೆಸರು ಹೇಳದೆಯೇ ತಾಯಿ ಪರ ವರುಣ್‌ ಮತಯಾಚನೆ!

| Published : May 24 2024, 12:49 AM IST / Updated: May 24 2024, 04:07 AM IST

ಬಿಜೆಪಿ, ಮೋದಿ ಹೆಸರು ಹೇಳದೆಯೇ ತಾಯಿ ಪರ ವರುಣ್‌ ಮತಯಾಚನೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದ ಪಿಲಿಭೀತ್‌ ಸಂಸದ ಹಾಗೂ ಬಿಜೆಪಿ ನಾಯಕ ವರುಣ್‌ ಗಾಂಧಿ ತನ್ನ ತಾಯಿ ಮನೇಕಾ ಗಾಂಧಿ ಪರ ಗುರುವಾರ ಇಲ್ಲಿ ಮತಯಾಚನೆ ಮಾಡಿದರು.

ಸುಲ್ತಾನ್‌ಪುರ್‌: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾದ ಪಿಲಿಭೀತ್‌ ಸಂಸದ ಹಾಗೂ ಬಿಜೆಪಿ ನಾಯಕ ವರುಣ್‌ ಗಾಂಧಿ ತನ್ನ ತಾಯಿ ಮನೇಕಾ ಗಾಂಧಿ ಪರ ಗುರುವಾರ ಇಲ್ಲಿ ಮತಯಾಚನೆ ಮಾಡಿದರು.

ವಿಶೇಷವೆಂದರೆ ವರುಣ್‌ ಗಾಂಧಿ ತಮ್ಮ ಭಾಷಣದುದ್ದಕ್ಕೂ ತಮ್ಮ ತಾಯಿಯ ಕುರಿತು, ಸ್ಥಳೀಯ ಜನತೆ ಹೊಂದಿರುವ ಅಭಿಮಾನದ ಬಗ್ಗೆ ಮಾತನಾಡಿದರೇ ಹೊರತೂ, ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಲಿಲ್ಲ.

ಎಲ್ಲೆಡೆ ಜನತೆ ತಮ್ಮ ಜನಪ್ರತಿನಿಧಿಯನ್ನು ಸಂಸದರೇ, ಮಂತ್ರಿಗಳೇ ಎಂದು ಕರೆಯುತ್ತಾರೆ. ಅದರೆ ಸುಲ್ತಾನ್‌ಪುರದ ಮತದಾರರು ಮಾತ್ರ ತಮ್ಮ ಸಂಸದೆಯನ್ನು ಮಾತಾಜೀ ಎಂದು ಕರೆಯುತ್ತಾರೆ. ಅದು ಜನತೆ ಅವರ ಬಗ್ಗೆ ಇಟ್ಟಿರುವ ಅಭಿಮಾನ ಎಂದು ವರುಣ್‌ ಹೇಳಿದರು.

ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಟೀಕಿಸಿದ ಕಾರಣ ಈ ಬಾರಿ ವರುಣ್‌ಗೆ ಟಿಕೆಟ್‌ ನಿರಾಕರಿಸಿ ಜಿತಿನ್‌ ಪ್ರಸಾದ್ ಅವರಿಗೆ ಟಿಕೆಟ್‌ ಟಿಕೆಟ್‌ ನೀಡಲಾಗಿತ್ತು. ಬಳಿಕ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದ್ದ ರಾಯ್‌ಬರೇಲಿಯಿಂದ ಸ್ಪರ್ಧಿಸುವ ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ವರುಣ್‌ ತಿರಸ್ಕರಿಸಿದರು ಎಂದು ವರದಿಗಳು ಹೇಳಿದ್ದವು. ಈ ವರದಿಯನ್ನು ಇತ್ತೀಚೆಗೆ ಮನೇಕಾ ಪರೋಕ್ಷವಾಗಿ ಒಪ್ಪಿದ್ದರು.