ಇಸ್ರೇಲ್‌ ಮೇಲೆ ಇರಾನ್‌ ದಾಳಿಗೆ ಕ್ಷಣಗಣನೆ

| Published : Apr 14 2024, 01:54 AM IST / Updated: Apr 14 2024, 04:59 AM IST

ಸಾರಾಂಶ

  ಯಾವುದೇ ಕ್ಷಣದಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸಲು ಇರಾನ್‌ ಸಜ್ಜಾಗಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಭಾನುವಾರವೇ ಈ ದಾಳಿ ನಡೆಯಬಹುದು ಎಂದೂ ಅಮೆರಿಕ ಹೇಳಿದೆ.

ಇರಾನ್‌ ದಾಳಿ ಯಾಕೆ?

ಕೆಲ ದಿನಗಳ ಹಿಂದೆ ಹಮಾಸ್‌ ಉಗ್ರರ ಮಿತ್ರ ದೇಶವಾಗಿರುವ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್‌ನ ದೂತಾವಾಸದ ಮೇಲೆ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಇರಾನ್‌ನ ಇಬ್ಬರು ಜನರಲ್‌ಗಳೂ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಇರಾನ್‌ ಪ್ರತೀಕಾರದ ಎಚ್ಚರಿಕೆ ನೀಡಿತ್ತು. ಅದರಂತೆ ಈಗ ಇಸ್ರೇಲ್‌ ಮೇಲೆ ದಾಳಿಗೆ ಸಿದ್ಧವಾಗಿದೆ ಎನ್ನಲಾಗಿದೆ.

ಟೆಹರಾನ್‌/ಟೆಲ್‌ ಅವಿವ್‌: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯ ಹಮಾಸ್‌ ಉಗ್ರರ ನಡುವೆ 7 ತಿಂಗಳಿನಿಂದ ನಡೆಯುತ್ತಿರುವ ಯುದ್ಧವು ಇದೀಗ ಇರಾನ್‌ ಹಾಗೂ ಇಸ್ರೇಲ್‌ ನಡುವೆಯೂ ಸಮರಕ್ಕೆ ಕಾರಣವಾಗುವ ಸನ್ನಿವೇಶಗಳನ್ನು ಹುಟ್ಟುಹಾಕಿದೆ. ಯಾವುದೇ ಕ್ಷಣದಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸಲು ಇರಾನ್‌ ಸಜ್ಜಾಗಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಭಾನುವಾರವೇ ಈ ದಾಳಿ ನಡೆಯಬಹುದು ಎಂದೂ ಅಮೆರಿಕ ಹೇಳಿದೆ.

ಗಾಜಾಪಟ್ಟಿಯಲ್ಲಿರುವ ಹಮಾಸ್‌ ಆಡಳಿತದ ಪರ ಇರಾನ್‌ ನಿಂತಿದೆ. ಹೀಗಾಗಿ ಇರಾನ್‌ ಮೇಲೂ ಇಸ್ರೇಲ್‌ ಆಗಾಗ ದಾಳಿ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸದ ಮೇಲೆ ಇಸ್ರೇಲ್‌ ದಾಳಿ ನಡೆಸಿ ಇಬ್ಬರು ಇರಾನಿಯನ್‌ ಜನರಲ್‌ಗಳನ್ನು ಹತ್ಯೆಗೈದಿತ್ತು. ಅದರ ಬೆನ್ನಲ್ಲೇ ಇರಾನ್‌ ಪ್ರತೀಕಾರದ ಶಪಥ ಮಾಡಿತ್ತು. ಈಗ ಇಸ್ರೇಲ್‌ ಮೇಲೆ ದಾಳಿಗೆ ಸಜ್ಜಾಗಿದೆ ಎಂದು ಹೇಳಲಾಗಿದೆ.

ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸುವ ಸಾಧ್ಯತೆಯಿದೆ. ಇಸ್ರೇಲ್‌ ಮೇಲೆ ನೇರವಾಗಿ ತನ್ನ ನೆಲದಿಂದಲೇ ದಾಳಿ ನಡೆಸುವ ಸಾಮರ್ಥ್ಯದ ಕ್ಷಿಪಣಿಗಳನ್ನು ಇರಾನ್‌ ಹೊಂದಿದೆ. ಅವುಗಳನ್ನು ಬಳಸಿ ಇಸ್ರೇಲ್‌ ಮೇಲೆ ದಾಳಿ ನಡೆಸಿದರೆ ಇರಾನ್‌ ಮತ್ತು ಇಸ್ರೇಲ್‌ ನಡುವೆ ಪೂರ್ಣ ಪ್ರಮಾಣದ ಯುದ್ಧವೇ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಇರಾನ್‌ ದಾಳಿ ನಡೆಸಲಿದೆ ಎಂಬ ಅಮೆರಿಕದ ಎಚ್ಚರಿಕೆಯ ಬೆನ್ನಲ್ಲೇ ಇಸ್ರೇಲ್‌ ತನ್ನೆಲ್ಲ ಸೈನಿಕರ ರಜೆಗಳನ್ನು ರದ್ದುಪಡಿಸಿದೆ. ಅಲ್ಲದೆ ಮೀಸಲು ಯೋಧರನ್ನು ಕೂಡ ಸೇನೆಗೆ ಕರೆಸಿಕೊಂಡಿದೆ.

ದಾಳಿ ಬೇಡ- ಇರಾನ್‌ಗೆ ಬೈಡೆನ್‌ ‘ಸೂಚನೆ’:

ಇಸ್ರೇಲ್‌ ಮೇಲೆ ದಾಳಿ ನಡೆಸದಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಇರಾನ್‌ಗೆ ‘ಸೂಚನೆ’ ನೀಡಿದ್ದಾರೆ. ಅದರ ಜೊತೆಗೇ, ಇರಾನ್‌ ದಾಳಿ ನಡೆಸಿದರೆ ಇಸ್ರೇಲ್‌ನ ಬೆಂಬಲಕ್ಕೆ ನಿಲ್ಲಲು ಅಮೆರಿಕದ ಯುದ್ಧ ಹಡಗುಗಳನ್ನು ರವಾನಿಸಿದ್ದಾರೆ ಎಂದು ಮಧ್ಯಪ್ರಾಚ್ಯದ ಕೆಲ ಮಾಧ್ಯಮಗಳು ವರದಿ ಮಾಡಿವೆ.