ಪಿಒಕೆಯಲ್ಲಿ 5 ದಿನಗಳ ಹಿಂಸಾತ್ಮಕ ಹೋರಾಟ ಅಂತ್ಯ

| Published : May 15 2024, 01:36 AM IST / Updated: May 15 2024, 06:37 AM IST

ಸಾರಾಂಶ

ಪಾಕ್‌ ಸರ್ಕಾರದ 2300 ಕೋಟಿ ರು. ಪ್ಯಾಕೇಜ್‌ ಹಿನ್ನೆಲೆ ಪಿಒಕೆಯಲ್ಲಿ 5 ದಿನಗಳ ಹಿಂಸಾತ್ಮಕ ಹೋರಾಟವನ್ನು ಅಂತ್ಯಗೊಳಿಸಲಾಗಿದೆ.

ಮುಜಫ್ಫರಾಬಾದ್‌ (ಪಿಒಕೆ): ಪಾಕ್‌ ಆಕ್ರಮಿತ ಕಾಶ್ಮೀರದ ಜನರು ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ 5 ದಿನಗಳ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಅಂತ್ಯಗೊಂಡಿದೆ.‘ಪಾಕಿಸ್ತಾನ ಸರ್ಕಾರ 2300 ಕೋಟಿ ರು. ಅಭಿವೃದ್ಧಿ ಪ್ಯಾಕೇಜ್‌ ಪ್ರಕಟಿಸಿದ್ದು, ನಮ್ಮ ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ. ಎಲ್ಲ ಪ್ರತಿಭಟನಾಕಾರರು ಹೋರಾಟ ಹಿಂಪಡೆದು ತಮ್ಮ ದೈನಂದಿನ ಚಟುವಟಿಕೆ ಆರಂಭಿಸಬೇಕು’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜಮ್ಮು-ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಮುಖ್ಯಸ್ಥ ಶೌಕತ್‌ ನವಾಜ್‌ ಮೀರ್‌ ಮಂಗಳವಾರ ಹೇಳಿದ್ದಾರೆ.

ಈ ಹಿಂಸಾತ್ಮಕ ಪ್ರತಿಭಟನೆ ಸೋಮವಾರ ಮೂವರು ಸೇರಿದಂತೆ ನಾಲ್ವರನ್ನು ಬಲಿ ಪಡೆದಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಿಒಕೆಯಾದ್ಯಂತ ಪಾಕ್‌ ವಿರುದ್ಧ ಹಾಗೂ ಭಾರತ ಪರ ಘೋಷಣೆ ಮೊಳಗಿದ್ದವು.