₹4 ಲಕ್ಷ ಕೋಟಿ ಮೌಲ್ಯದ ಅಮೆರಿಕ ಕಂಪನಿ ದಿವಾಳಿ!

| Published : Nov 08 2023, 01:00 AM IST / Updated: Nov 08 2023, 01:01 AM IST

ಸಾರಾಂಶ

ಕಚೇರಿ ಸ್ಥಳಾವಕಾಶ ಒದಗಿಸುತ್ತಿದ್ದ ವೀ ವರ್ಕ್‌ ಪತನ. 39 ದೇಶಗಳ 777 ಕಡೆ ಸೇವೆ ನೀಡುತ್ತಿರುವ ಕಂಪನಿ.

ನ್ಯೂಯಾರ್ಕ್‌: ಕಚೇರಿ ಸ್ಥಳಾವಕಾಶ ಒದಗಿಸುವ ಅಮೆರಿಕ ಮೂಲದ ಖ್ಯಾತ ಸ್ಟಾರ್ಟಪ್‌ ಕಂಪನಿ ‘ವೀ ವರ್ಕ್‌’ ದಿವಾಳಿ ಅಂಚು ತಲುಪಿದೆ. ಕೆಲವೇ ವರ್ಷಗಳ ಹಿಂದೆ ಅಂದಾಜು 4 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯದ ಮೂಲಕ ಜಾಗತಿಕ ಹೂಡಿಕೆದಾರರ ನೆಚ್ಚಿನ ಕಂಪನಿಯಾಗಿದ್ದ ಅದೀಗ ನಿರ್ವಹಣಾ ವೆಚ್ಚ ಸರಿದೂಗಿಸಲಾಗದೇ ಪರದಾಡುತ್ತಿದ್ದು, ದಿವಾಳಿಯಿಂದ ರಕ್ಷಣೆ ಕೋರಿ ಅಮೆರಿಕ ಸರ್ಕಾರದ ಮೊರೆ ಹೋಗಿದೆ.

ಇತ್ತೀಚೆಗೆ ಕ್ರೆಡಿಟ್‌ ಸೂಸಿ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಹಾಗೂ ಕಂಪನಿಗಳು ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ದಿವಾಳಿ ಆಗಿದ್ದವು. ಇದರ ಬೆನ್ನಲ್ಲೇ ‘ವೀ ವರ್ಕ್‌’ ಸರದಿ ಬಂದಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ‘ನಾವು ಪಾಲುದಾರರ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಇಡೀ ಕಂಪನಿಯನ್ನು ಪುನರ್‌ರಚಿಸಲು ಉದ್ದೇಶಿಸಿದ್ದೇವೆ. ಈ ಮೂಲಕ ಕಂಪನಿಯ ಒಟ್ಟಾರೆ ಸಾಲದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಉದ್ದೇಶಿಸಿದ್ದೇವೆ ಮತ್ತು ನಮ್ಮ ಕಚೇರಿ ಲೀಸ್‌ ಉದ್ಯಮವನ್ನು ಮರುಪರಿಶೀಲನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದೆ.ಅಲ್ಲದೆ ನಿರ್ವಹಣೆ ಇಲ್ಲದ ವಿವಿಧ ಸ್ಥಳಗಳಲ್ಲಿನ ಗುತ್ತಿಗೆಯನ್ನು ರದ್ದುಗೊಳಿಸುವ ಮನವಿಯನ್ನು ಕೂಡಾ ಮಾಡುತ್ತಿದ್ದೇವೆ. ಇದರಿಂದ ತೊಂದರೆಗೆ ಒಳಗಾಗುವವರಿಗೆ ಮೊದಲೇ ಈ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಕಂಪನಿ ಸಿಇಒ ಡೇವಿಡ್‌ ಟೋಲಿ ತಿಳಿಸಿದ್ದಾರೆ.

ದಿವಾಳಿಗೆ ಏನು ಕಾರಣ?:ರಿಯಲ್‌ ಎಸ್ಟೇಟ್‌ ವೆಚ್ಚ, ಇತರೆ ವೆಚ್ಚಗಳ ಏರಿಕೆ ಮತ್ತು ಇದರಿಂದಾಗುತ್ತಿರುವ ನಷ್ಟವು ಕಂಪನಿಯ ಈ ಸ್ಥಿತಿಗೆ ಕಾರಣ ಎಂದು ಅದು ಹೇಳಿದೆ. ಸದ್ಯ ವೀ ವರ್ಕ್‌ 39 ದೇಶಗಳ 777 ಸ್ಥಳಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.ಕಂಪನಿ ವಿಶ್ವದಾದ್ಯಂತ ಅಂದಾಜು 4500 ಸಿಬ್ಬಂದಿಗಳನ್ನು ಹೊಂದಿದ್ದು, ಕಳೆದ ವರ್ಷ 26000 ಕೋಟಿ ರು. ಆದಾಯ ಹೊಂದಿತ್ತು.------ಭಾರತದ ಘಟಕ

ಸೇಫ್‌: ವೀರ್ವಾನಿ

ನವದೆಹಲಿ: ವೀ ವರ್ಕ್‌ ಜಾಗತಿಕ ಕಂಪನಿ ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರೂ, ಭಾರತದಲ್ಲಿನ ಕಂಪನಿ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ. ನಮ್ಮದು ಸ್ವತಂತ್ರ ಕಂಪನಿ ಎಂದು ವೀ ವರ್ಕ್‌ ಇಂಡಿಯಾದ ಸಿಇಒ ಕರಣ್‌ ವೀರ್ವಾನಿ ಸ್ಪಷ್ಟಪಡಿಸಿದ್ದಾರೆ. ಭಾರತದ ಘಟಕದಲ್ಲಿ ವೀ ವರ್ಕ್‌ ಶೇ.27ರಷ್ಟು ಪಾಲು ಹೊಂದಿದ್ದರೆ, ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಕಂಪನಿ ಎಂಬಸಿ ಗ್ರೂಪ್‌ ಶೇ.73ರಷ್ಟು ಪಾಲು ಹೊಂದಿದೆ.

+++++

ಜಾಗತಿಕ ಘಟಕದ ಅರ್ಜಿ ನಮ್ಮ ಮೇಲೆ ಯಾವುದೇ ಪರಿಣಾಮ ಬೀರದು. ಭಾರತದಲ್ಲಿ ನಾವು 50 ಕೇಂದ್ರಗಳ ಮೂಲಕ 50000 ಡೆಸ್ಕ್‌ಗಳನ್ನು ನಿರ್ವಹಿಸುತ್ತಿದ್ದೇವೆ ಎಂದು ವೀರ್ವಾನಿ ತಿಳಿಸಿದ್ದಾರೆ. ಕಳೆದ ವರ್ಷ ಕಂಪನಿ 1400 ಕೋಟಿ ರು. ವಹಿವಾಟು ನಡೆಸಿತ್ತು.