ಇರಾನ್‌ ದಾಳಿಯನ್ನು ಇಸ್ರೇಲ್‌ ಹಿಮ್ಮೆಟ್ಟಿಸಿದ್ದು ಹೇಗೆ?

| Published : Apr 15 2024, 01:20 AM IST / Updated: Apr 15 2024, 04:14 AM IST

ಇರಾನ್‌ ದಾಳಿಯನ್ನು ಇಸ್ರೇಲ್‌ ಹಿಮ್ಮೆಟ್ಟಿಸಿದ್ದು ಹೇಗೆ?
Share this Article
  • FB
  • TW
  • Linkdin
  • Email

ಸಾರಾಂಶ

300ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್‌ಗಳನ್ನು ಬಳಸಿ ಇರಾನ್‌ ದಾಳಿ ನಡೆಸಿದರೂ, ಇಸ್ರೇಲ್‌ ಅವೆಲ್ಲವನ್ನೂ ಹೊಡೆದುರುಳಿಸುವ ಮೂಲಕ ತನ್ನ ದೇಶವನ್ನು ರಕ್ಷಿಸಿಕೊಂಡಿದೆ.

ಟೆಹ್ರಾನ್‌/ಟೆಲ್‌ ಅವೀವ್‌: 300ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್‌ಗಳನ್ನು ಬಳಸಿ ಇರಾನ್‌ ದಾಳಿ ನಡೆಸಿದರೂ, ಇಸ್ರೇಲ್‌ ಅವೆಲ್ಲವನ್ನೂ ಹೊಡೆದುರುಳಿಸುವ ಮೂಲಕ ತನ್ನ ದೇಶವನ್ನು ರಕ್ಷಿಸಿಕೊಂಡಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇಸ್ರೇಲ್‌ ಬಳಿ ಇರುವ ವೈಮಾನಿಕ ರಕ್ಷಣಾ ವ್ಯವಸ್ಥೆಗಳೇ ಉತ್ತರ.

ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೂ ಇರಾನ್‌ ಕ್ಷಿಪಣಿ, ಡ್ರೋನ್‌ ದಾಳಿ ಆರಂಭಿಸಿದಾಗ ಇಸ್ರೇಲ್‌ನಲ್ಲಿ ಸೈರನ್‌ಗಳು ಮೊಳಗಿ, ನಾಗರಿಕರಿಗೆ ಹೊರಗೆ ಬಾರದಂತೆ ಎಚ್ಚರಿಕೆ ಕೊಟ್ಟವು. ಬಳಿಕ ಪ್ರತಿ ದಾಳಿ ನಡೆಸಿ, ಎದುರಾಳಿ ದೇಶದ ಬಹುತೇಕ ಎಲ್ಲ ಕ್ಷಿಪಣಿ, ಡ್ರೋನ್‌ಗಳನ್ನೂ ಇಸ್ರೇಲ್‌ ಹೊಡೆದು ಹಾಕಿತು.

ಏನಿದು ವೈಮಾನಿಕ ರಕ್ಷಣಾ ವ್ಯವಸ್ಥೆ?:

ಸುತ್ತಲೂ ವಿರೋಧಿ ದೇಶಗಳನ್ನು ಹೊಂದಿರುವ ಇಸ್ರೇಲ್‌ ತನ್ನ ದೇಶವನ್ನು ಕ್ಷಿಪಣಿ ದಾಳಿಗಳಿಂದ ರಕ್ಷಿಸಿಕೊಳ್ಳಲು ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಆ್ಯರೋ, ಐರನ್‌ ಡೋಮ್‌ ಎಂಬ ಹೆಸರಿನ ವ್ಯವಸ್ಥೆಗಳು ಇವಾಗಿವೆ. ಅಲ್ಪ ದೂರ, ಮಧ್ಯಮ ದೂರ ಹಾಗೂ ಬಹು ದೂರದಿಂದ ಬರುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಪ್ರತ್ಯೇಕವಾದ ವ್ಯವಸ್ಥೆಗಳು ಇವೆ.

ಕಾರ್ಯಾಚರಣೆ ಹೇಗೆ?:

ಇಸ್ರೇಲ್‌ನತ್ತ ಕ್ಷಿಪಣಿ ಉಡಾವಣೆಯಾಗುತ್ತಿದ್ದಂತೆ ರಾಡಾರ್‌ ಅದನ್ನು ಗುರುತಿಸುತ್ತದೆ. ಕ್ಷಿಪಣಿ ಪತ್ತೆಯಾದ ಬಳಿಕ ಅದು ಬರುತ್ತಿರುವ ವೇಗ, ದಾಳಿ ಮಾಡಬಹುದಾದ ಸ್ಥಳಗಳ ಮಾಹಿತಿಯನ್ನು ತಕ್ಷಣಕ್ಕೆ ನಿಯಂತ್ರಣ ಕೇಂದ್ರಗಳಿಗೆ ರವಾನೆ ಮಾಡುತ್ತದೆ. ಅದಾದ ಕೂಡಲೇ ಇಸ್ರೇಲ್‌ನ ಕ್ಷಿಪಣಿಗಳು ಉಡಾವಣೆಯಾಗಿ, ಶಬ್ದಕ್ಕಿಂತ 9 ಪಟ್ಟು ವೇಗದಲ್ಲಿ ಎದುರಾಳಿ ದೇಶದ ಕ್ಷಿಪಣಿಯನ್ನು ಹೊಡೆದುರುಳಿಸುತ್ತವೆ.

ಇದೇ ಸೌಲಭ್ಯ ಬಳಸಿ ಇರಾನ್‌ ದಾಳಿಯನ್ನು ಇಸ್ರೇಲ್‌ ಹಿಮ್ಮೆಟ್ಟಿಸಿದೆ. ಪ್ಯಾಲೆಸ್ತೀನ್‌, ಲೆಬನಾನ್‌, ಹಮಾಸ್‌ ದಾಳಿಯನ್ನೂ ಇದೇ ರೀತಿ ಇಸ್ರೇಲ್‌ ತಡೆಯುತ್ತಿದೆ.