ಇರಾನ್‌ ಶಕ್ತಿಯ ಅಂದಾಜು ಅವರಿಗಿಲ್ಲ : ಇಸ್ರೇಲ್‌ ಮೇಲೆ ಪ್ರತೀಕಾರಕ್ಕೆ ಖಮೇನಿ ಕರೆ

| Published : Oct 28 2024, 01:01 AM IST / Updated: Oct 28 2024, 04:06 AM IST

ಸಾರಾಂಶ

ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಿಂದ ಕುಪಿತನಾಗಿರುವ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ, ತೀವ್ರ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ದೇರ್ ಅಲ್-ಬಲಾಹ್‌ (ಗಾಜಾ): ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಿಂದ ಕುಪಿತನಾಗಿರುವ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ, ತೀವ್ರ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.

‘ಇರಾನ್‌ ಬಗ್ಗೆ ಇಸ್ರೇಲ್‌ ತಪ್ಪು ಲೆಕ್ಕಾಚಾರ ಹಾಕುತ್ತಿದೆ. ಅವರಿಗೆ ನಮ್ಮ ಜನರ ಬಲ, ಇಚ್ಛಾಶಕ್ತಿಯ ಅಂದಾಜಿಲ್ಲ. ಇದನ್ನವರಿಗೆ ಮನದಟ್ಟು ಮಾಡಿಸುವ ಅಗತ್ಯವಿದೆ’ ಎಂದು ಗುಡುಗಿರುವ ಖಮೇನಿ, ‘ಇದನ್ನು ಸಾಧಿಸಿ, ರಾಷ್ಟ್ರದ ಹಿತಕ್ಕಾಗಿ ಕ್ರಮ ಕೈಗೊಳ್ಳುವುದು ಅಧಿಕಾರಿಗಳಿಗೆ ಬಿಟ್ಟ ವಿಚಾರ’ ಎಂದು ಹೇಳಿದ್ದಾರೆ.

ಅಂತೆಯೇ, ಶನಿವಾರ ಮುಂಜಾವು ತಮ್ಮ ಮೇಲೆ ಇಸ್ರೇಲ್‌ ನಡೆಸಿದ ದಾಳಿಯನ್ನು ಅತಿಯಾಗಿ ವೈಭವೀಕರಿಸುವುದು ಅಥವ ಅದನ್ನು ಕಡೆಗಣಿಸುವುದೂ ಬೇಡ ಎಂದು ಖಮೇನಿ ಸಲಹೆ ನೀಡಿದ್ದಾರೆ.

ಅವರ ಈ ಹೇಳಿಕೆಯನ್ನು, ಇಸ್ರೇಲ್‌ ಮೇಲೆ ಸಮಯ ಸಾಧಿಸಿ ದಾಳಿ ಮಾಡಲು ಇರಾನ್‌ ಕಾಯುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ, ಇಸ್ರೇಲ್‌ ನಡೆಸಿದ ದಾಳಿಗೆ ಉತ್ತರಿಸುವ ಹಕ್ಕು ನಮಗಿದೆ ಎಂದು ಇರಾನ್‌ ಸೇನೆ ಹೇಳಿತ್ತು.

ದಾಳೀಲಿ ಎಲ್ಲಾ ಗುರಿ ಈಡೇರಿದೆ: ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು

ಟೆಲ್‌ ಅವಿವ್‌: ಇರಾನ್‌ನ ಮೇಲೆ 100 ವಿಮಾನ ಬಳಸಿ ಶನಿವಾರ ನಡೆಸಿದ ದಾಳಿಯಲ್ಲಿ ನಾವು ಅಂದುಕೊಂಡ ಎಲ್ಲಾ ಗುರಿಗಳನ್ನೂ ಸಾಧಿಸಲಾಗಿದ ಎಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಈ ಮೂಲಕ ದಾಳಿಯ ಮುಖ್ಯ ಉದ್ದೇಶ ಇರಾನ್‌ ಸೇನಾನೆಲೆ, ಕ್ಷಿಪಣಿ, ಡ್ರೋನ್‌ ಉತ್ಪಾದನಾ ಘಟಕಗಳನ್ನು ಧ್ವಂಸಗೊಳಿಸುವುದಾಗಿತ್ತು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕಳೆದ ಅ.7ರಂದು ಇಸ್ರೇಲ್‌ ಮೇಲೆ ಇರಾನ್‌ 180 ಕ್ಷಿಪಣಿ ಬಳಸಿ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್‌ ಶನಿವಾರ ಈ ಪ್ರತಿದಾಳಿ ನಡೆದಿತ್ತು.

ಇಸ್ರೇಲ್‌ನ ಮೊಸಾದ್‌ ಕಚೇರಿ ಬಳಿ ಟ್ರಕ್‌ ದಾಳಿ

ಟೆಲ್‌ ಅವಿವ್‌: ಇಸ್ರೇಲ್‌- ಇರಾನ್‌ ಸಂಘರ್ಷದ ನಡುವೆಯೇ, ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಕಚೇರಿ ಬಳಿ ಟ್ರಕ್ಕೊಂದು ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ 35 ಜನರು ಗಾಯಗೊಂಡಿದ್ದಾರೆ. ಇದು ಅಪಘಾತವೋ, ಉದ್ದೇಶಪೂರ್ವಕ ಕೃತ್ಯವೋ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಇಸ್ರೇಲಿ ಪ್ರಜೆಗಳು ವಾರದ ರಜೆ ಕಳೆದು ಬಸ್ಸಿನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ಟ್ರಕ್‌ ಡಿಕ್ಕಿ ಹೊಡೆದಿದೆ. ಮೊಸಾದ್‌ ಪ್ರಧಾನ ಕಚೇರಿ ಹಾಗೂ ಸೇನಾ ನೆಲೆಗಳಿದ್ದು, ಬಸ್‌ ನಿಲ್ದಾಣ ಎರಡೂ ಪ್ರದೇಶಗಳಿಗೂ ಹತ್ತಿರವಾಗಿದೆ.

ಇಸ್ರೇಲ್‌ ದಾಳಿಗೆ ಇರಾನ್‌ನ 2 ಸೇನಾ ನೆಲೆಗಳು ಧ್ವಂಸ: ಉಪಗ್ರಹ ಚಿತ್ರಗಳಲ್ಲಿ ಪತ್ತೆ

ದುಬೈ: ಶನಿವಾರ ಮುಂಜಾನೆ ಇರಾನ್‌ ಮೇಲೆ ಇಸ್ರೇಲ್‌ರ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ, ಇರಾನ್‌ನ ಎರಡು ರಹಸ್ಯ ಸೇನಾ ನೆಲಗಳು ಧ್ವಂಸಗೊಂಡಿರುವ ವಿಷಯ ಉಪಗ್ರಹ ಚಿತ್ರಗಳ ಮೂಲಕ ಬಹಿರಂಗವಾಗಿದೆ. ಈ ಚಿತ್ರಗಳನ್ನು ಇಸ್ರೇಲ್‌ ಭಾನುವಾರ ಬಿಡುಗಡೆ ಮಾಡಿದೆ. ಧ್ವಂಸವಾದ ಎರಡು ಕಟ್ಟಡಗಳ ಪೈಕಿ ಪಾರ್ಚಿನ್‌ ಸೇನಾ ನೆಲೆಯಲ್ಲಿ ಈ ಮೊದಲು ಇರಾನ್‌ನ ಪರಮಾಣು ಯೋಜನೆ ಚಟುವಟಿಕೆ ನಡೆಸುತ್ತಿತ್ತು, ಇನ್ನು ಖೊಜಿರ್‌ ಸೇನಾ ನೆಲೆ ಬ್ಯಾಲೆಸ್ಟಿಕ್‌ ಕ್ಷಿಪಣಿಗಳಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಆದರೆ ಎರಡೂ ಸೇನಾ ನೆಲೆಗಳಿಗೆ ಹಾನಿಯಾಗಿದ್ದನ್ನು ಇರಾನ್‌ ಒಪ್ಪಿಕೊಂಡಿಲ್ಲ. ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸೀಮಿತ ಪ್ರಮಾಣದ ಹಾನಿ ಆಗಿದೆ ಎಂದಷ್ಟೇ ಅದು ಪ್ರತಿಕ್ರಿಯೆ ನೀಡಿತ್ತು.