ಸಾರಾಂಶ
ಅಪರಾಧ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ಮಾಲ್‌ಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೊಸದಾಗಿ ‘ಕಾಲು ನಡಿಗೆ’ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪರಾಧ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ಮಾಲ್‌ಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೊಸದಾಗಿ ‘ಕಾಲು ನಡಿಗೆ’ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಯುಕ್ತರು, ನಗರ ವ್ಯಾಪ್ತಿ ಬೆಳಗ್ಗೆ ಹಾಗೂ ಸಂಜೆ ಬೀಟ್‌ಗಳಲ್ಲಿ ಸಿಬ್ಬಂದಿ ಗಸ್ತು ತಿರುಗಾಟ ನಡೆಸುತ್ತಿದ್ದಾರೆ ಎಂದರು.
ನಗರಾದ್ಯಂತ ಬೀಟ್ ವ್ಯವಸ್ಥೆಯನ್ನು ಅಧಿಕಾರಿಗಳ ಜತೆ ಸಮಾಲೋಚಿಸಿ ಮತ್ತಷ್ಟು ಸುಧಾರಿಸಲಾಗಿದ್ದು, ಜನ ಸೇರುವ ಸ್ಥಳಗಳಲ್ಲಿ ಪೊಲೀಸರ ಉಪಸ್ಥಿತಿ ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ಅಂತೆಯೇ ಮಾರುಕಟ್ಟೆ, ಮಾಲ್‌ಗಳು, ಪ್ರಾರ್ಥನ ಮಂದಿರ ಹಾಗೂ ದೇವಾಲಯಗಳು ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ಕಾಲು ನಡಿಗೆ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.ಈ ಬೀಟ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಗಳು ಗಸ್ತು ತಿರುಗಾಟ ನಡೆಸಲಿದ್ದಾರೆ. ಯಾವುದೇ ಗಲಾಟೆ ಹಾಗೂ ಕಾನೂನು ಬಾಹಿರ ಕೃತ್ಯಗಳು ವರದಿಯಾದರೆ ತಕ್ಷಣವೇ ಗಸ್ತು ಸಿಬ್ಬಂದಿ ಸ್ಪಂದಿಸಲಿದ್ದಾರೆ. ಅಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರ ಹೆಚ್ಚು ಉಪಸ್ಥಿತಿ ಇದ್ದರೆ ಅಕ್ರಮ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಸಹಾಯಕ್ಕೆ 112ಗೆ ಕರೆ ಮಾಡಿ:ಈಗಿರುವ ನಮ್ಮ-112ಗೆ ಸಾರ್ವಜನಿಕರು ಕರೆ ಮಾಡಿ ಪೊಲೀಸರ ಸಹಾಯವನ್ನು ಪಡೆಯಬಹುದು. ತಮ್ಮ ಠಾಣಾ ಮಟ್ಟಗಳಲ್ಲಿ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಗಸ್ತು ವ್ಯವಸ್ಥೆಯನ್ನು ರೂಪಿಸಬೇಕು. ಎಲ್ಲೆಲ್ಲಿ ರೌಡಿಗಳು ಹಾಗೂ ಕಳ್ಳಕಾಕರ ಕಾಟಗಳಿವೆ ಆ ಪ್ರದೇಶಗಳನ್ನು ಗುರುತಿಸಿ ಗಸ್ತು ಬಲಪಡಿಸುವಂತೆ ಅಧಿಕಾರಿಗಳಿಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.