ಬೆಂಗಳೂರು : ಕಂಪನಿಯೊಂದರ ಪಾಲುದಾರನ ಸೋಗಲ್ಲಿ ಸಂದೇಶ ಕಳುಹಿಸಿ ₹ 1.05 ಕೋಟಿ ವಂಚನೆ

| Published : Nov 18 2024, 01:21 AM IST / Updated: Nov 18 2024, 04:41 AM IST

ಸಾರಾಂಶ

ಕಂಪನಿಯೊಂದರ ಪಾಲುದಾರನ ಸೋಗಿನಲ್ಲಿ ಸೈಬರ್‌ ವಂಚಕರು ಸಂದೇಶ ಕಳುಹಿಸಿ ಉದ್ಯಮಿಯಿಂದ ₹1.05 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂಬ ದೂರು ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಕಂಪನಿಯೊಂದರ ಪಾಲುದಾರನ ಸೋಗಿನಲ್ಲಿ ಸೈಬರ್‌ ವಂಚಕರು ಸಂದೇಶ ಕಳುಹಿಸಿ ಉದ್ಯಮಿಯಿಂದ ₹1.05 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂಬ ದೂರು ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೆ ಒಳಗಾದ ಜಯನಗರ 4ನೇ ಬ್ಲಾಕ್‌ ನಿವಾಸಿ ಕೆ.ವಿ.ಗೋಪಾ ಕುಮಾರ್‌ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ದೂರುದಾರ ಉದ್ಯಮಿ ಕೆ.ವಿ.ಗೋಪಾ ಕುಮಾರ್‌ ನಂದಿನಿ ಲೇಔಟ್‌ನಲ್ಲಿ ಫಿಡೆಸ್‌ ಎಲೆಕ್ಟ್ರಾನಿಕ್ಸ್‌ ಹೆಸರಿನ ಕಂಪನಿ ಹೊಂದಿದ್ದು ಅದರ ನಿರ್ದೇಶಕರೂ ಆಗಿದ್ದಾರೆ.ಇದೇ ಕಂಪನಿಗೆ ಎ.ಕೆ.ಸಂತೋಷ್‌ ಸಹ ನಿರ್ದೇಶಕರಾಗಿದ್ದಾರೆ. ಇತ್ತೀಚೆಗೆ ಸಂತೋಷ್‌ ಅವರ ಸೋಗಿನಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಮುಖಾಂತರ ಕೆ.ವಿ.ಗೋಪಾ ಕುಮಾರ್‌ಗೆ ಸಂದೇಶ ಕಳುಹಿಸಿ ತುರ್ತಾಗಿ ₹95 ಲಕ್ಷ ಕಳುಹಿಸುವಂತೆ ಸಂದೇಶ ಕಳುಹಿಸಿದ್ದಾನೆ.

ಈ ವೇಳೆ ಕೆ.ವಿ.ಗೋಪಾ ಕುಮಾರ್‌ ತಕ್ಷಣ ಆರ್‌ಟಿಜಿಎಸ್‌ ಮುಖಾಂತರ ಅಪರಿಚಿತನ ಬ್ಯಾಂಕ್‌ ಖಾತೆಗೆ ₹50 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ಕಂಪನಿ ಪ್ರಾಜೆಕ್ಟ್‌ ಸಂಬಂಧ ಮತ್ತಷ್ಟು ಹಣ ಬೇಕು ಎಂದು ಅಪರಿಚಿತ ವ್ಯಕ್ತಿ ಮತ್ತೆ ಸಂದೇಶ ಕಳುಹಿಸಿದ್ದಾನೆ. ಅದರಂತೆ ಕೆ.ವಿ.ಗೋಪಾ ಕುಮಾರ್‌ ಅಪರಿಚಿತನ ಬ್ಯಾಂಕ್‌ ಖಾತೆಗೆ ₹45 ಲಕ್ಷ ಮತ್ತು ₹10 ಲಕ್ಷ ವರ್ಗಾಯಿಸಿದ್ದಾರೆ.

ಕೆಲ ದಿನಗಳ ಬಳಿಕ ಕಂಪನಿ ಸಹ ಡೈರೆಕ್ಟರ್‌ ಸಂತೋಷ್‌ ಅವರನ್ನು ವಿಚಾರಿಸಿದಾಗ, ತಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದಾರೆ. ಬಳಿಕ ಕೆ.ವಿ.ಗೋಪಾ ಕುಮಾರ್‌ಗೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.