ಸಾರಾಂಶ
ಬೆಂಗಳೂರು : ಖಾಸಗಿ ಕಂಪನಿಯ ಬ್ಯಾಂಕ್ ಖಾತೆಗಳ ಡೇಟಾ ಕಳವು ಮಾಡಿ ನಕಲಿ ದಾಖಲೆ ಸೃಷ್ಟಿಸಿ ಕಂಪನಿಯ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 12.51 ಕೋಟಿ ರು. ಹಣ ವರ್ಗಾಯಿಸಿಕೊಂಡಿಸಿದ್ದ ಪ್ರಕರಣ ಸಂಬಂಧ ಹೊರರಾಜ್ಯದ ನಾಲ್ವರು ಸೈಬರ್ ವಂಚಕರನ್ನು ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಪರಮಾರ್ ನೇಹಾಬೆಹನ್ ವಿಫುಲ್ ಬಾಯಿ, ವೈಭವ್ ಪಿತಾದಿಯಾ, ಶೈಲೇಶ್ ಮತ್ತು ಶುಭಂ ಬಂಧಿತರು. ಆರೋಪಿಗಳಿಂದ 1.83 ಕೋಟಿ ರು. ನಗದು, ಎರಡು ಮೊಬೈಲ್, ನಕಲಿ ಐಬಿ ಫಾರಂ ಜಪ್ತಿ ಮಾಡಲಾಗಿದೆ. ಆರೋಪಿಗಳು ಇತ್ತೀಚೆಗೆ ನಗರದ ‘ಡ್ರೀಮ್ ಪ್ಲಗ್ ಪೇ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’(ಕ್ರೆಡ್) ಕಂಪನಿಯ ಡೇಟಾ ಕಳವು ಮಾಡಿ ಕಂಪನಿಯ ಖಾತೆಗಳಿಂದ 12.51 ಕೋಟಿ ರು. ವರ್ಗಾಯಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಬ್ಯಾಂಕ್‌ನಲ್ಲಿ ವಹಿವಾಟು:
ಪ್ರಕರಣದ ತನಿಖೆ ವೇಳೆ ಸೈಬರ್ ಪೊಲೀಸರು ಕಂಪನಿ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಗುಜರಾತ್‌ನ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಕಂಪನಿಯ ಖಾತೆಗಳಿಗೆ ಸಂಬಂಧಿಸಿದಂತೆ ಹಣದ ವಹಿವಾಟು ನಡೆದಿರುವುದು ಕಂಡು ಬಂದಿದೆ. ಬಳಿಕ ರಾಜ್‌ಕೋಟ್‌ಗೆ ತೆರಳಿ ಪರಿಶೀಲನೆ ಮಾಡಿದಾಗ ಆರೋಪಿ ಪರಮಾರ್ ನೇಹಾಬೆಹನ್ ವಿಫುಲ್ ಬಾಯಿ ಬಗ್ಗೆ ಗೊತ್ತಾಗಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಳಿದ ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಬಳಿಕ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಖಾತೆ ಪರಿಶೀಲನೆ ವೇಳೆ ವಂಚನೆ ಬೆಳಕಿಗೆ:
ಇತ್ತೀಚೆಗೆ ‘ಡ್ರೀಮ್ ಪ್ಲಗ್ ಪೇ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ನಿರ್ದೇಶಕ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ 12.51 ಕೋಟಿ ರು. ಹಣ ವರ್ಗಾವಣೆಯಾಗಿರುವುದು ಕಂಡು ಬಂದಿತ್ತು. ದುಷ್ಕರ್ಮಿಗಳು ಬ್ಯಾಂಕ್ ಖಾತೆಗಳ ಡೇಟಾ ಕಳವು ಮಾಡಿ ಕಾರ್ಪೊರೇಟ್ ಇಂಟರ್‌ನೆಟ್ ಬ್ಯಾಂಕಿಂಗ್ ಫಾರಂಗಳು, ಸಹಿ ಹಾಗೂ ಸೀಲುಗಳನ್ನು ನಕಲು ಮಾಡಿ ಅಕ್ರಮವಾಗಿ 17 ಬ್ಯಾಂಕ್ ಖಾತೆಗಳಿಗೆ ಈ ಹಣ ವರ್ಗಾಯಿಸಿಕೊಂಡು ವಂಚಿಸಿರುವುದು ಗೊತ್ತಾಗಿತ್ತು. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ ನೌಕರನೇ ಮಾಸ್ಟರ್ ಮೈಂಡ್:
‘ಡ್ರೀಮ್ ಪ್ಲಗ್ ಪೇ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯು ಇಂದಿರಾನಗರದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ನೋಡಲ್ ಮತ್ತು ಚಾಲ್ತಿ ಖಾತೆಗಳನ್ನು ಹೊಂದಿದೆ. ಬಂಧಿತ ಆರೋಪಿಗಳ ಪೈಕಿ ಪ್ರಮುಖ ಆರೋಪಿಯಾದ ವೈಭವ್ ಪಿತಾದಿಯಾ ಗುಜರಾತ್‌ನ ರಾಜ್‌ಕೋಟನ್ ಅಕ್ಸಿಸ್ ಬ್ಯಾಂಕ್‌ನ ಕಾರ್ಪೊರೇಟ್ ವಿಭಾಗದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಈತ ನಗರದ ‘ಡ್ರೀಮ್ ಪ್ಲಗ್ ಪೇ ಟೆಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಬ್ಯಾಂಕ್ ಖಾತೆಗಳ ಡೇಟಾ ಕಳವು ಮಾಡಿದ್ದ ಎಂದು ತಿಳಿದುಬಂದಿದೆ.
17 ಖಾತೆಗಳಿಗೆ ಹಣ ವರ್ಗಾವಣೆ:
ಬಳಿಕ ಕಂಪನಿ ಹೆಸರಿನಲ್ಲಿ ನಕಲಿ ಕಾರ್ಪೊರೇಟ್ ಇಂಟರ್‌ನೆಟ್ ಬ್ಯಾಕಿಂಗ್ ಫಾರಂ ಹಾಗೂ ಬೋರ್ಡ್ ರೆಸೆಲೂಷನ್ ದಾಖಲೆಗಳನ್ನು ಸೃಷ್ಟಿಸಿದ್ದ. ಬಳಿಕ ಉಳಿದ ಆರೋಪಿಗಳಿಂದ ಗುಜರಾತ್‌ನ ಬರೂಜ್ ಜಿಲ್ಲೆಯ ಅಂಕಲೇಶ್ವರದ ಆಕ್ಸಿಸ್ ಬ್ಯಾಂಕ್‌ಗೆ ದಾಖಲೆ ಸಲ್ಲಿಸಿ, ಕಂಪನಿಯ ನೋಡಲ್ ಬ್ಯಾಂಕ್ ಖಾತೆಗಳ ಇಂಟರ್‌ನೆಟ್ ಬ್ಯಾಂಕಿಂಗ್ ವಶಕ್ಕೆ ಪಡೆದು ಕಂಪನಿಯ ಖಾತೆಗಳಿಂದ ಗುಜರಾತ್ ಮತ್ತು ರಾಜಸ್ಥಾನದ 17 ಬ್ಯಾಕ್ ಖಾತೆಗಳಿಗೆ 12.50 ಕೋಟಿ ರು. ವರ್ಗಾವಣೆ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.