ನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ : 12 ಜನ ಬೈಕ್‌ ಕಳ್ಳರ ಬಂಧನ: 62 ಬೈಕ್‌ ಜಪ್ತಿ

| Published : Nov 16 2024, 01:47 AM IST / Updated: Nov 16 2024, 04:22 AM IST

ಸಾರಾಂಶ

ನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ಕೈಗೊಂಡು 12 ಮಂದಿ ಬೈಕ್‌ ಕಳ್ಳರನ್ನು ಬಂಧಿಸಿ, ಸುಮಾರು ₹60 ಲಕ್ಷ ಮೌಲ್ಯದ 62 ಬೈಕ್‌, ಕಾರು, ಆಟೋರಿಕ್ಷಾ, 25 ಮೊಬೈಲ್‌ಗಳು ಹಾಗೂ 21 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ನಗರದ 7 ಠಾಣೆಗಳ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ಕೈಗೊಂಡು 12 ಮಂದಿ ಬೈಕ್‌ ಕಳ್ಳರನ್ನು ಬಂಧಿಸಿ, ಸುಮಾರು ₹60 ಲಕ್ಷ ಮೌಲ್ಯದ 62 ಬೈಕ್‌, ಕಾರು, ಆಟೋರಿಕ್ಷಾ, 25 ಮೊಬೈಲ್‌ಗಳು ಹಾಗೂ 21 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಆರ್‌.ಟಿ.ನಗರ ಠಾಣೆ: ನಗರದಲ್ಲಿ ಬೈಕ್‌ ಕದ್ದು ಚಾರ್ಸಿ ನಂಬರ್‌, ಎಂಜಿನ್‌ ನಂಬರ್‌ಗಳನ್ನು ಅಳಿಸಿ ನಕಲಿ ನಂಬರ್‌ ಅಚ್ಚು ಹಾಕಿ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರ ನಿವಾಸಿಗಳಾದ ಇಮ್ರಾನ್‌ (20) ಮತ್ತು ಸೈಯದ್‌ ಸಮೀರ್‌ (20) ಬಂಧಿಸಿ ₹ 9.50 ಲಕ್ಷ ಮೌಲ್ಯದ 13 ಬೈಕ್‌, 1 ಕಾರನ್ನು ಜಪ್ತಿ ಮಾಡಲಾಗಿದೆ.

ಬಿಡಿಭಾಗ ಖರೀದಿಗೆ ಬಂದು ಬೈಕ್‌ ಕಳವು: ಮೆಕ್ಯಾನಿಕ್‌ ಶಾಪ್‌ ಹೊಂದಿರುವ ಆರೋಪಿ ಇಮ್ರಾನ್‌ ಬೈಕ್‌ ಬಿಡಿ ಭಾಗಗಳ ಖರೀದಿಗಾಗಿ ಇಬ್ಬರು ಹಿಂದೂಪುರದಿಂದ ಶಿವಾಜಿನಗರಕ್ಕೆ ಬರುತ್ತಿದ್ದರು. ಕೆಲಸ ಮುಗಿಸಿಕೊಂಡು ವಾಪಾಸ್‌ ಹೋಗುವಾಗ ಬೈಕ್‌ ಕಳವು ಮಾಡುತ್ತಿದ್ದರು. ಬಳಿಕ ಆ ಬೈಕ್‌ನ ಅಸಲಿ ಇಂಜಿನ್‌ ಮತ್ತು ಚಾರ್ಸಿ ನಂಬರ್‌ಗಳನ್ನು ಅಳಿಸಿ, ನಕಲಿ ನಂಬರ್‌ ಅಚ್ಚುಹಾಕಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು.

ಸೋಲದೇವನಹಳ್ಳಿ ಠಾಣೆ: ಮನೆ ಎದುರು, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಬಣ್ಣ ಲೇಔಟ್‌ ನಿವಾಸಿ ಇಮ್ರಾನ್‌ ಖಾನ್‌(19) ಬಂಧಿತ. ಮತ್ತೊಬ್ಬ ಅಪ್ರಾಪ್ತನಿಗೆ ತಿಳಿವಳಿಕೆ ನೀಡಿ ಪೋಷಕರಿಗೆ ಒಪ್ಪಿಸಲಾಗಿದೆ. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 9 ಬೈಕ್‌ ಹಾಗೂ ಆಟೋರಿಕ್ಷಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಚಿಕ್ಕಬಾಣವಾರದ ಶಾಂತಿನಗರ ನಿವಾಸಿಯೊಬ್ಬರ ಬೈಕ್‌ ಕಳವು ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಲಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆ: ಒಂಟಿ ವೃದ್ಧೆ ವಾಸವಿದ್ದ ಮನೆಗೆ ರಾತ್ರಿ ನುಗ್ಗಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುದ್ದಿನಪಾಳ್ಯ ನಿವಾಸಿ ನವೀನ್‌ ಕುಮಾರ್‌(20) ಬಂಧಿತ. ಆರೋಪಿಯಿಂದ ₹2.50 ಲಕ್ಷ ಮೌಲ್ಯದ 5 ಬೈಕ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಾಗಲಗುಂಟೆ ಸಮೀಪದ ಸಿಡೇದಹಳ್ಳಿಯಲ್ಲಿ ವಾಸವಿದ್ದ ಒಂಟಿ ವೃದ್ಧೆ ಮನೆಗೆ ನುಗ್ಗಿದ್ದ ಈತ ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿ ಸಿಕ್ಕ ಹೆಲ್ಮೆಟ್‌ ಮೇಲಿನ ಬೆರಳಚ್ಚು ಮುದ್ರೆ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಚಿಕ್ಕಜಾಲ ಪೊಲೀಸ್ ಠಾಣೆ: ಬೈಕ್‌ ಕಳವು ಮಾಡುತ್ತಿದ್ದ ಅರುಣ್‌ ಕುಮಾರ್‌ ಅಲಿಯಾಸ್ ಕಾಡಾ(31) ಮತ್ತು ಚನ್ನರಾಯಪಟ್ಟಣದ ತೌಸಿಫ್‌(21) ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿ ₹14.45 ಲಕ್ಷ ಮೌಲ್ಯದ 11 ಬೈಕ್‌ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಚಿಕ್ಕಜಾಲ ಸಮೀಪದ ಕುದಿರೆಗೆ ಗ್ರಾಮದ ನಿವಾಸಿ ನಾರಾಯಣಪುರ ಸರ್ಕಲ್‌ನ ಅಂಗಡಿಯೊಂದರ ಮುಂದೆ ನಿಲುಗಡೆ ಮಾಡಿದ್ದ ಬೈಕ್‌ ಕಳ್ಳತನ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ: ನಗರದ ವಿವಿಧೆಡೆ ಬೈಕ್‌, ಮನೆಗಳವು, ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿ,₹ 14 ಲಕ್ಷ ಮೌಲ್ಯದ 11 ಬೈಕ್‌, 25 ಮೊಬೈಲ್‌, 21 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಡೆಹರಾಡೂನ್‌ ಮೂಲದ ಜತಿನ್‌(21) ಮತ್ತು ಮನೀಶ್‌ ತಾಪಾ(18) ಬಂಧಿತರು. ಇತ್ತೀಚೆಗೆ ವ್ಯಕ್ತಿಯೊಬ್ಬರು ಕೋನಪ್ಪನ ಅಗ್ರಹಾರದ ಕಾವೇರಿ ಆಸ್ಪತ್ರೆ ಹಿಂಭಾಗದ ಬಾರ್‌ ಎದುರು ನಿಲುಗಡೆ ಮಾಡಿದ್ದ ಬೈಕ್‌ ಕಳುವಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಎಚ್‌ಎಸ್‌ಆರ್‌ ಲೇಔಟ್‌ನ ಸಲಾಡ್‌ ಕಿಚನ್‌ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಬಾಣಸವಾಡಿ ಪೊಲೀಸ್‌ ಠಾಣೆ: ನಗರದ ವಿವಿಧೆಡೆ ಬೈಕ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 10 ಲಕ್ಷ ರು. ಮೌಲ್ಯದ 9 ಬೈಕ್‌, ಒಂದು ಕಾರು ಜಪ್ತಿ ಮಾಡಲಾಗಿದೆ.

ಕಾಡುಗೋಡಿ ಪೊಲೀಸ್ ಠಾಣೆ: ಇತ್ತೀಚೆಗೆ ನಿರ್ಮಾಣ ಹಂತದ ಕಟ್ಟಡಕ್ಕೆ ನುಗ್ಗಿ ಕಾಪರ್‌ ಮತ್ತು ಇನ್ಸುಲೇಟರ್‌ ವೈಯರ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿ, ₹2.50 ಲಕ್ಷ ಮೌಲ್ಯದ 4 ಬೈಕ್‌ ಜಪ್ತಿ ಮಾಡಲಾಗಿದೆ.ಕಾಡುಗೋಡಿಯ ಫೈಜಾನ್‌(22) ಮತ್ತು ಅಸ್ಸಾಂ ಮೂಲದ ಶಾನೂರು ಆಲಿ(18) ಬಂಧಿತರು. ಇತ್ತೀಚೆಗೆ ಕಾಡುಗೋಡಿ ಸಮೀಪದ ಟೀ ಪಾರ್ಕ್‌ ಸಮೀಪದ ಟೈಟಾನಿಯಂ ಟೆಕ್‌ ಪ್ರಾಜೆಕ್ಟ್‌ ನಿರ್ಮಾಣ ಹಂತದ ಕಟ್ಟಡಕ್ಕೆ ನುಗ್ಗಿ ಕಾಪರ್‌ ಮತ್ತು ಇನ್ಸುಲೇಟರ್‌ ವೈಯರ್‌ ಕದ್ದು ಪರಾರಿಯಾಗುತ್ತಿದ್ದರು. ಈ ವೇಳೆ ಸೆಕ್ಯುರಿಟಿ ಗಾರ್ಡ್‌ಗಳು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ನಗರದ ವಿವಿಧೆಡೆ ಬೈಕ್‌ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇವರಿಂದ 4 ಬೈಕ್‌ ಜಪ್ತಿ ಮಾಡಲಾಗಿದೆ.