ಸಾರಾಂಶ
ಬೆಂಗಳೂರು : ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ ಪರಿಣಾಮ ಚಕ್ರಕ್ಕೆ ಸಿಲುಕಿ ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ಸುಮಾರು 2 ಗಂಟೆಗೆ ತುಮಕೂರು ರಸ್ತೆಯ ಪಾರ್ಲೆಜಿ ಫ್ಯಾಕ್ಟರಿ ಸಮೀಪದ ಟೋಲ್ ಬಳಿ ನಡೆದಿದೆ.
ಲಗ್ಗೆರೆ ನಿವಾಸಿ ಬಸವರಾಜು(37) ಮೃತ ದುರ್ದೈವಿ. ರಾಯಚೂರಿನ ಸಿಂಧನೂರು ಮೂಲದ ಬಸವರಾಜು ಕೂಲಿ ಕಾರ್ಮಿಕನಾಗಿದ್ದು, ಲಗ್ಗೆರೆಯಲ್ಲಿ ನೆಲೆಸಿದ್ದರು. ಮುಂಜಾನೆ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಟೋಲ್ ಬಳಿ ನಿಂತಿದ್ದ ಸರಕು ಸಾಗಣೆ ಲಾರಿಯೊಂದರ ಕೆಳಗೆ ಹೋಗಿ ನಿದ್ದೆಗೆ ಜಾರಿದ್ದಾರೆ. ಸರಕು ಸಾಗಣೆ ಲಾರಿ ಚಾಲಕ ಟೀ ಕುಡಿದು ಬಳಿಕ ಲಾರಿ ಬಳಿ ಬಂದಿದ್ದು, ಏಕಾಏಕಿ ಲಾರಿ ಚಲಾಯಿಸಿದ್ದಾನೆ. ಈ ವೇಳೆ ಕೆಳಗೆ ಮಲಗಿದ್ದ ಬಸವರಾಜು ಮೇಲೆ ಲಾರಿ ಚಕ್ರಗಳು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಸವರಾಜುವಿನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಬಳಿಕ ಸರಕು ಸಾಗಣೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.