ಸಾರಾಂಶ
ಎಚ್.ಡಿ.ಕೋಟೆ : ತಾಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಎರಡು ಜಾನುವಾರು ಹಾಗೂ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೊತ್ತ ಗ್ರಾಮದ ದೊಡ್ಡಸೋಮಪ್ಪ ಅವರ ಮೂರನೇ ಪುತ್ರ ರಾಜಶೇಖರ್ (40) ಮೃತ ವ್ಯಕ್ತಿ.
ರಾಜಶೇಖರ್ ಅವರು ತಾವು 60 ಸಾವಿರ ಬೆಲೆ ಬಾಳುವ ಹಳ್ಳಿ ಕಾರ್ ಹೋರಿ ಮತ್ತು 55 ಸಾವಿರ ಬೆಲೆ ಬಾಳುವ ಇಲಾತಿ ಹಸುವನ್ನು ಸಾಕಿದ್ದರು. ತಮಗಿದ್ದ ಎರಡು ಎಕರೆ ಜಮೀನಿನ ಜೊತೆಗೆ ಗ್ರಾಮದವರದ್ದೇ ಆದ ಎರಡು ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಉಳುಮೆ ಮಾಡುತ್ತಿದ್ದರು.
ಎಂದಿನಂತೆ ಗುರುವಾರ ದನಗಳನ್ನು ಮೇಯಿಸಲು ಜಮೀನಿಗೆ ಬಿಟ್ಟು ಸಂಜೆ ವೇಳೆ ಮನೆಗೆ ಕರೆತರಲು ಹೋದ ಸಂದರ್ಭದಲ್ಲಿ ವಿದ್ಯುತ್ ಸಣ್ಣ ತಂತಿಯು ನೆಲಕ್ಕೆ ಬಿದ್ದಿರುವುದನ್ನು ಗಮನಿಸದೇ ತುಳಿದು ಮೃತಪಟ್ಟಿದ್ದಾರೆ. ಇದೇ ವೇಳೆ ಜಾನುವಾರುಗಳು ಸಹ ವಿದ್ಯುತ್ ಪ್ರವಹಿಸಿ ಮೃತಪಟ್ಟಿವೆ.
ಎಂಟು ಗಂಟೆಯಾದರೂ ರಾಜಶೇಖರ್ ಮನೆಗೆ ಬಾರದಿದ್ದಾಗ ಅವರ ಹೆಂಡತಿ ನೇತ್ರಾವತಿ ಗ್ರಾಮದ ಕೆಲವರ ಜೊತೆ ಜಮೀನಿಗೆ ತೆರಳಿದ್ದು, ಈ ವೇಳೆ ರಾಸುಗಳೊಂದಿಗೆ ಪತಿ ವಿದ್ಯುತ್ ಅವಘಡದಿಂದ ಮೃತಪಟ್ಟಿರುವುದು ಕಂಡು ಬಂದಿದೆ.
ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದು, ಗ್ರಾಮಸ್ಥರು ಸೆಸ್ಕ್ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸೆಸ್ಕ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ಮೃತದೇಹವನ್ನು ತೆಗೆಯದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಪೊಲೀಸ್ ಸಿಬ್ಬಂದಿ ಮನವೊಲಿಸಲು ಯತ್ನಿಸಿದರು ಅವರ ಪ್ರಯತ್ನ ವಿಫಲವಾಗಿದೆ.
ಮೃತ ರಾಜಶೇಖರ್ ಅವರಿಗೆ ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಾಗದ ಹಿನ್ನೆಲೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು.
ಕಾರು ಡಿಕ್ಕಿ: ಓರ್ವ ಮಹಿಳೆ ಸಾವು, ಐವರಿಗೆ ಗಾಯ
ನಂಜನಗೂಡು : ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಹನುಮನಪುರ ಗ್ರಾಮದ ಲಕ್ಷ್ಮಣ ಅವರ ಪತ್ನಿ ಮಂಜುಳಾ (32) ಮೃತ ದುರ್ದೈವಿ.
ಹನುಮನಪುರ ಗ್ರಾಮದ ಲಕ್ಷ್ಮಣ, ಮಗಳು ಸಿಂಧು, ಚಾಮರಾಜನಗರ ತಾಲೂಕಿನ ಉತ್ತರಹಳ್ಳಿ ಗ್ರಾಮದ ಶಿವಮಲ್ಲು, ರಾಮಸಮುದ್ರ ಗ್ರಾಮದ ರಾಜಪ್ಪ, ತಾಲೂಕಿನ ದೊಡ್ಡ ಕವಲಂದೆ ಗ್ರಾಮದ ನೆಹರು ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಕ್ಷ್ಮಣ ತನ್ನ ಪತ್ನಿ ಮಂಜುಳಾ ಪುತ್ರಿ ಸಿಂಧು ಅವರ ಜೊತೆಗೆ ಸಂಸಾರ ಸಮೇತ ದೊಡ್ಡ ಕವಲಂದೆ ಗ್ರಾಮದ ಕಾರ್ಪೊರೇಷನ್ ಬ್ಯಾಂಕಿಗೆ ಬಂದಿದ್ದರು. ಬ್ಯಾಂಕ್ ಕೆಲಸ ಮುಗಿಸಿ ಚಾಮರಾಜನಗರ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ನಂಜನಗೂಡು ಕಡೆಯಿಂದ ಅತಿ ವೇಗವಾಗಿ ಬಂದ ಕೆಂಪು ಬಣ್ಣದ ಕಾರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಂಜುಳಾ ತನ್ನ ಮಕ್ಕಳನ್ನು ಬಚಾವ್ ಮಾಡಿದ್ದಾಳೆ. ಕಾರಿನ ಚಾಲಕ ಮಂಜುಳಾ ಹೊಟ್ಟೆಯ ಮೇಲೆ ಹರಿಸಿದ ಪರಿಣಾಮ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪತಿ ಲಕ್ಷ್ಮಣ ಮತ್ತು ಪುತ್ರಿ ಸಿಂಧು, ರಾಜಪ್ಪ, ಶಿವಮಲ್ಲು, ನೇಹರ್ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾರು ಮತ್ತು ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕವಲಂದೆ ಎಸ್.ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರಗೆ ಹಸ್ತಾಂತರಿಸಲಾಯಿತು. ತಾಲೂಕಿನ ಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.