ಪ್ರತ್ಯೇಕ ಪ್ರಕರಣಗಳಲ್ಲಿ ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಂಚೆದೊಡ್ಡಿ ಹಾಗೂ ಅಂಕನಹಳ್ಳಿ ಗ್ರಾಮಗಳಲ್ಲಿ ಜರುಗಿದೆ. ಅಂಚೆದೊಡ್ಡಿ ಗ್ರಾಮದ ರೈತ ನಂಜೇಗೌಡ (56), ಅಂಕನಹಳ್ಳಿಯಲ್ಲಿ ರಾಜಣ್ಣರ ಪುತ್ರ ಮಹೇಶ್ (44)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಳವಳ್ಳಿ:
ಪ್ರತ್ಯೇಕ ಪ್ರಕರಣಗಳಲ್ಲಿ ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಂಚೆದೊಡ್ಡಿ ಹಾಗೂ ಅಂಕನಹಳ್ಳಿ ಗ್ರಾಮಗಳಲ್ಲಿ ಜರುಗಿದೆ.ಗುರುವಾರ ಅಂಚೆದೊಡ್ಡಿ ಗ್ರಾಮದ ರೈತ ನಂಜೇಗೌಡ (56) ಸಾಲಭಾದೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಅಂಕನಹಳ್ಳಿಯಲ್ಲಿ ರಾಜಣ್ಣರ ಪುತ್ರ ಮಹೇಶ್ (44) ಮತ್ತೊಬ್ಬ ರೈತ ಸಾಲ ಭಾದೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಚೆದೊಡ್ಡಿ ಗ್ರಾಮದ ನಂಜೇಗೌಡ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ತೀವ್ರವಾಗಿ ಅಸ್ವಸ್ಥ ಗೊಂಡಿದ್ದರು ಇವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾದೆ.ನಂಜೇಗೌಡರು ಕೃಷಿ ಕಾರ್ಯಕ್ಕಾಗಿ ಸೊಸೈಟಿ, ಸ್ವಸಹಾಯ ಸಂಘಗಳು ಜೊತೆಗೆ ಖಾಸಗಿ ಸಾಲ ಸೇರಿದಂತೆ ಸುಮಾರು 10 ಲಕ್ಷ ರು ಸಾಲ ಮಾಡಿಕೊಂಡಿದ್ದರು ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಹೇಳಲಾಗಿದೆ. ಕುಟುಂಬದವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಂಕನಹಳ್ಳಿಯ ಮಹೇಶ್ ಬುಧವಾರ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ನಂತರ ಇವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಮೃತಪಟ್ಟರೆಂದು ವರದಿಯಾಗಿದೆ.ಮರದ ವ್ಯಾಪಾರದ ಜೊತೆಗೆ ಒಂದೂವರೆ ಎಕರೆ ಜಮೀನು ಹೊಂದಿದ್ದ ಮಹೇಶ್ ಅವರು ಬೇಸಾಯಕ್ಕಾಗಿ ಕಂದೇಗಾಲ ಗ್ರಾಮದ ಬರೋಡಾ ಬ್ಯಾಂಕ್ ನಲ್ಲಿ 9 ಲಕ್ಷ ರು. ಒಡವೆ ಮೇಲಿನ ಸಾಲ ಪಡೆದಿದ್ದರು. ಜೊತೆಗೆ ಸ್ವಸಹಾಯ ಸಂಘಗಳಲ್ಲಿ ಸಹ 3 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿ ಕೊಂಡಿದ್ದರು ಎನ್ನಲಾಗಿದೆ.
ಸಾಲಭಾದೆ, ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸತ್ತ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಳಿದು ಬಂದಿದೆ. ಈ ಸಂಬಂಧ ಶುಕ್ರವಾರ ಬೆಳಗ್ಗೆ ಮೃತನ ಮಗ ನಾಗೇಂದ್ರ ನೀಡಿದ ದೂರಿನ ಮೇರೆಗೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.