ಸಾರಾಂಶ
ಮೈಸೂರು : ದ್ವಿಚಕ್ರವಾಹನಗಳಿಗೆ ಅಳವಡಿಸಿದ್ದ 217 ದೋಷಪೂರಿತ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶಗೊಳಿಸಲಾಯಿತು.
ನಗರದ ಲಲಿತಮಹಲ್ ರಸ್ತೆಯಲ್ಲಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಬಳಿ ರಸ್ತೆಯಲ್ಲಿ ದ್ವಿ ಚಕ್ರವಾಹನಗಳಿಂದ ಬೇರ್ಪಡಿಸಿದ್ದ 217 ದೋಷಪೂರಿತ ಸೈಲೆನ್ಸರ್ ಗಳ ಮೇಲೆ ಬುಧವಾರ ಬೆಳಗ್ಗೆ ರೋಡ್ ರೋಲರ್ ಹತ್ತಿಸಿ ನಾಶಪಡಿಸುವ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರ ಪೊಲೀಸರು ಎಚ್ಚರಿಕೆಯನ್ನು ರವಾನಿಸಿದರು.
ಸೈಲೆನ್ಸರ್ ಗಳ ನಾಶಪಡಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಆ.31 ರಿಂದ ಸೆ.3 ರವರೆಗೆ 4 ದಿನ ನಗರದಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಒಟ್ಟು 94 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ದೋಷಪೂರಿತ ಸೈಲೆನ್ಸರ್ ಗಳನ್ನು ಬದಲಾಯಿಸಿ, ಅವುಗಳನ್ನು ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ವಿಲೇವಾರಿ ಮಾಡಲಾಗಿದೆ. ಅಲ್ಲದೆ, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನಗಳ ಸವಾರರ ವಿರುದ್ಧ ಐಎಂವಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
2024ನೇ ಸಾಲಿನಲ್ಲಿ ಒಟ್ಟು 217 ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ಐಎಂವಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ತಪಾಸಣೆ ಮುಂದುವರೆಯಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. 2ನೇ ಬಾರಿ ದಂಡವನ್ನು ಎರಡು ಪಟ್ಟು ಹೆಚ್ಚು ವಿಧಿಸಲಾಗುತ್ತದೆ. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದರೇ ಅಂತಹವರ ವಾಹನ ವಶಪಡಿಸಿಕೊಂಡು, ವಾಹನ ಸವಾರರ ಡಿಎಲ್ ರದ್ದುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಸಂಚಾರ ಉಪ ವಿಭಾಗದ ಎಸಿಪಿ ಎಚ್. ಪರಶುರಾಮಪ್ಪ, ವಿವಿಧ ಸಂಚಾರ ಠಾಣೆಗಳ ಇನ್ಸ್ ಪೆಕ್ಟರ್ ಲವ, ಮಮತಾ, ರೇಖಾ ಬಾಯಿ, ಶ್ರೀಧರ್, ಶರತ್ ಮೊದಲಾದವರು ಇದ್ದರು.
ಬಿಇಎಂಎಲ್ ಲೇಔಟ್ ವ್ಯಕ್ತಿ ನಾಪತ್ತೆ ಮೈಸೂರು: ನಗರದ ಶ್ರೀರಾಂಪುರ 2ನೇ ಹಂತದ ಬಿಇಎಂಎಲ್ ಲೇಔಟ್ ನಿವಾಸಿ ಟಿ.ಎಂ. ಸೋಮಶೇಖರಸ್ವಾಮಿ(49) ನಾಪತ್ತೆಯಾಗಿದ್ದಾರೆ. ಸೆ.1ರ ರಾತ್ರಿ 8.30ಕ್ಕೆ ಮನೆಯಿಂದ ಬೈಕಿನಲ್ಲಿ ಮೆಡಿಷನ್ ತರಲು ಹೋದವರು ವಾಪಸ್ ಬಂದಿಲ್ಲ ಎಂದು ಪತ್ನಿ ಎಸ್.ಎಚ್. ಶಾಂತಕುಮಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚಹರೆ- 5.7 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕಪ್ಪು ತಲೆ ಕೂದಲು, ಬೋಳು ತಲೆ, ಫ್ರೆಂಚ್ ಟೈಪ್ ಗಡ್ಡ ಬಿಟ್ಟಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ. ಕಾಣೆಯಾದ ದಿನ ನೆವಿ ಬ್ಲೂ ಟೀ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418324, ಮೊ. 94808 02247 ಸಂಪರ್ಕಿಸಲು ಕುವೆಂಪುನಗರ ಠಾಣೆಯ ಪೊಲೀಸರು ಕೋರಿದ್ದಾರೆ.