ಕರ್ನಾಟಕದ ಯುವತಿಯರ ಬಳಸಿ ಚೀನೀಯರ ಹನಿ ಟ್ರಾಪ್‌ ದಂಧೆ!

| Published : Jul 10 2024, 12:39 AM IST

ಕರ್ನಾಟಕದ ಯುವತಿಯರ ಬಳಸಿ ಚೀನೀಯರ ಹನಿ ಟ್ರಾಪ್‌ ದಂಧೆ!
Share this Article
  • FB
  • TW
  • Linkdin
  • Email

ಸಾರಾಂಶ

ಚೀನಾದ ಸೈಬರ್ ಅಪರಾಧಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 3000 ಭಾರತೀಯರನ್ನು ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ ಮುಖಾಂತರ ಕರೆದೊಯ್ದಿದ್ದಾರೆ ಹಾಗೂ ಅವರಿಂದ ನಗ್ನ ಕರೆಗಳನ್ನು ಮಾಡಿಸಿ ಜನರನ್ನು ಹನಿ-ಟ್ರ್ಯಾಪ್ ಮಾಡಿಸುತ್ತಿದ್ದಾರೆ ಎಂಬ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಹೈದರಾಬಾದ್‌: ಚೀನಾದ ಸೈಬರ್ ಅಪರಾಧಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 3000 ಭಾರತೀಯರನ್ನು ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ ಮುಖಾಂತರ ಕರೆದೊಯ್ದಿದ್ದಾರೆ ಹಾಗೂ ಅವರಿಂದ ನಗ್ನ ಕರೆಗಳನ್ನು ಮಾಡಿಸಿ ಜನರನ್ನು ಹನಿ-ಟ್ರ್ಯಾಪ್ ಮಾಡಿಸುತ್ತಿದ್ದಾರೆ ಎಂಬ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಹೀಗೆ ಸಿಲುಕಿದವರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಮುಂಬೈನವರೂ ಇದ್ದಾರೆ.

ಈ ಸೈಬರ್ ಕ್ರಿಮಿನಲ್‌ಗಳ ಕಾರ್ಯವೈಖರಿಯನ್ನು ಖುದ್ದು ಈ ಸಂಚಿನ ಸಂತ್ರಸ್ತರಾದ ತೆಲಂಗಾಣ ಮೂಲದ ಸಿವಿಲ್ ಇಂಜಿನಿಯರಿಂಗ್‌ ಪದವೀಧರ ಮುನ್ಷಿ ಪ್ರಕಾಶ್ ಎಂಬುವರು ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ಸರ್ಕಾರದ ಮಧ್ಯಸ್ಥಿಕೆಯಿಂದ ಬಚಾವಾಗಿ ಕಾಂಬೋಡಿಯಾದಿಂದ ತವರಿಗೆ ಮರಳಿದ್ದಾರೆ.

ಹನಿ ಟ್ರಾಪ್‌ ದಂಧೆ ಹೇಗೆ?:

ಹೈದರಾಬಾದ್ ಮೂಲದ ಐಟಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಕಾಶ್ ಅವರು ವಿದೇಶದಲ್ಲಿ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ಹಲವಾರು ಉದ್ಯೋಗ ಸೈಟ್‌ಗಳಲ್ಲಿ ತಮ್ಮ ಪ್ರೊಫೈಲ್ ಅನ್ನು ಪೋಸ್ಟ್ ಮಾಡಿದ್ದರು.

ಈ ನಡುವೆ ಅವರ ಪ್ರೊಫೈಲ್‌ ನೋಡಿ, ಕಾಂಬೋಡಿಯಾದಲ್ಲಿ ಏಜೆಂಟ್ ಆಗಿರುವ ವಿಜಯ್ ಎಂಬಾತ ಕರೆ ಮಾಡಿದ್ದ ಹಾಗೂ ಪ್ರಕಾಶ್‌ ಅವರಿಗೆ ಆಸ್ಟ್ರೇಲಿಯಾದಲ್ಲಿ ಕೆಲಸ ನೀಡುವುದಾಗಿ ಹೇಳಿದ್ದ. ಅದಕ್ಕೂ ಮುನ್ನ ಮಲೇಷ್ಯಾಗೆ ಬರುವಂತೆ ಸೂಚಿಸಿದ್ದ.

ಮಲೇಷ್ಯಾಗೆ ಹೋದಾಗ ಅಲ್ಲಿಂದ ಪ್ರಕಾಶ್‌ರನ್ನುಕಾಂಬೋಡಿಯಾಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರ ಪಾಸ್‌ಪೋರ್ಟ್‌ ವಶಪಡಿಸಿಕೊಂಡು ಕೂಡಿ ಹಾಕಲಾಗಿತ್ತು. ಆಗ ಹುಡುಗಿಯರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸಲು ಮತ್ತು ಬಳಸಲು ಅವರಿಗೆ 10 ದಿನಗಳ ತರಬೇತಿಯನ್ನು ನೀಡಲಾಗಿತ್ತು.

‘ಹೀಗೆಯೇ ಅಲ್ಲಿ ನನ್ನ ರೀತಿ ನೌಕರಿ ಆಸೆಗೆ ಬಲಿಯಾಗಿ ಸಿಲುಕಿರುವ 3000 ಭಾರತೀಯರಿದ್ದಾರೆ. ಅವರಲ್ಲಿ ಹುಡುಗಿಯರೂ ಇದ್ದಾರೆ. ಬಂಧನ ಶಿಬಿರಗಳಿಂದಲೇ ಹುಡುಗಿಯರಿಗೆ ನಗ್ನ ಕರೆಗಳನ್ನು ಮಾಡಲು ಒತ್ತಾಯಿಸಲಾಗುತ್ತದೆ. ಈ ನಗ್ನ ಕರೆಗಳನ್ನು ಮಾಡಿಸಿ ಫೋನ್‌ ಕರೆ ಸ್ವೀಕರಿಸಿದವರನ್ನು ಹನಿ ಟ್ರಾಪ್‌ ಮಾಡಿ ದುಡ್ಡು ಕೀಳಲಾಗುತ್ತದೆ’ ಎಂದು ಮುನ್ಷಿ ಪ್ರಕಾಶ್‌ ಹೇಳಿದ್ದಾರೆ.