ಸಾರಾಂಶ
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಕಳೆದ ಏಪ್ರಿಲ್‌ನಿಂದ ಹಲವು ಬಾರಿ ನೋಟಿಸ್ ನೀಡಿದರೂ ಬಾಕಿ ತೆರಿಗೆ ಪಾವತಿಸದ 4,600 ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿದೆ.
ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ, ಕಳೆದ ಏಪ್ರಿಲ್‌ನಿಂದ ಹಲವು ಬಾರಿ ನೋಟಿಸ್ ನೀಡಿದರೂ ಬಾಕಿ ತೆರಿಗೆ ಪಾವತಿಸದ 4,600 ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿದೆ.
ಕಳೆದ ಏಪ್ರಿಲ್‌ನಿಂದ ಒಟ್ಟು 3.95 ಲಕ್ಷ ಆಸ್ತಿಗಳ ಮಾಲೀಕರು ₹738 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಈ ಪೈಕಿ ಈವರೆಗೆ 1.31 ಲಕ್ಷ ಆಸ್ತಿಗಳ ಮಾಲೀಕರು ₹273 ಕೋಟಿ ತೆರಿಗೆ ಪಾವತಿಸಿದ್ದಾರೆ. ಇನ್ನೂ 2.64 ಲಕ್ಷ ಆಸ್ತಿಗಳಿಂದ ₹474.77 ಕೋಟಿ ಬಾಕಿ ತೆರಿಗೆ ಪಾವತಿಯಾಗಬೇಕಿದೆ. ಈ ಆಸ್ತಿಗಳ ಪೈಕಿ ಹಲವು ಬಾರಿ ಬಾಕಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದರೂ, ತೆರಿಗೆ ಪಾವತಿಸದ 4,600 ವಾಣಿಜ್ಯ ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗಿದೆ.
60.67% ತೆರಿಗೆ ವಸೂಲಿ
ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ ಒಟ್ಟು ₹5,210 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹೊಂದಿದೆ. ಅದನ್ನು ಮುಟ್ಟಲು ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳುತ್ತಿದೆ. ಸೆ.1ರವರೆಗೆ ಒಟ್ಟು ₹3,208.59 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಒಟ್ಟು ಗುರಿಯ ಶೇ.60.67ರಷ್ಟು ತೆರಿಗೆ ಸಂಗ್ರಹವಾದಂತಾಗಿದೆ.