ಸಾರಾಂಶ
ರಾಜ್ಯದಲ್ಲಿ ನಿರ್ದಿಷ್ಟ ಉದ್ದೇಶಿತ ಹತ್ಯೆ ನಡೆಸಲು ಸಂಚು ರೂಪಿಸಿದ್ದ ಪಾಕ್ ಮೂಲದ ಉಗ್ರ ಜಾಲವೊಂದನ್ನು ಬಯಲಿಗೆಳೆದಿರುವ ಪಂಜಾಬ್ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಚಂಡೀಗಢ (ಪಂಜಾಬ್): ರಾಜ್ಯದಲ್ಲಿ ನಿರ್ದಿಷ್ಟ ಉದ್ದೇಶಿತ ಹತ್ಯೆ ನಡೆಸಲು ಸಂಚು ರೂಪಿಸಿದ್ದ ಪಾಕ್ ಮೂಲದ ಉಗ್ರ ಜಾಲವೊಂದನ್ನು ಬಯಲಿಗೆಳೆದಿರುವ ಪಂಜಾಬ್ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಇವರೆಲ್ಲಾ ಪಾಕಿಸ್ತಾನದ ಗುಪ್ತಚರ ಸಂಸ್ಥೇ ಐಎಸ್‌ಐ ನಿಯಂತ್ರಣದಲ್ಲಿರುವ ಉಗ್ರ ಸಂಘಟನೆಯೊಂದರ ಸದಸ್ಯರು ಎಂಬ ವಿಷಯ ತಿಳಿದುಬಂದಿದೆ.
ಬಂಧಿತರನ್ನು ರಾಜ್ ಭೂಪಿಂದರ್ ಸಿಂಗ್, ರಮಣ್ ಕುಮಾರ್ ಮತ್ತು ಜಗಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೂರು .30 ಬ್ಯಾರೆಲ್ ಮತ್ತು ಐದು 32 ಬ್ಯಾರೆಲ್ ಪಿಸ್ತೂಲ್‌ಗಳು, ಒಂಬತ್ತು ಶಸ್ತ್ರಾಸ್ತ್ರ ಪೆಟ್ಟಿಗೆಗಳು ಮತ್ತು 30 ಸಜೀವ ಗುಂಡು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು, ಭಠಿಂಡಾ ನಗರದ ಗೋವಿಂದನಗರ ಗ್ರಾಮದ ಸೇತುವೆ ಬಳಿ ಚೆಕ್‌ಪೋಸ್ಟ್ ನಿರ್ಮಿಸಿ ಬಲೆ ಬೀಸಿ ಮೂವರನ್ನು ಬಂಧಿಸಿದ್ದಾರೆ. ಇವರೆಲ್ಲಾ ಕಾನೂನುಬಾಹಿರ ಚಟುವಟಿಕೆಗಳ ಆರೋಪದಲ್ಲಿ ಸಂಗ್ರೂರ್ಗ ಜೈಲಿನಲ್ಲಿ ಬಂಧಿತ ಕೆಲವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿದೆ.ಬಂಧಿತರು ಮಧ್ಯಪ್ರದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ರಾಜ್ಯದಲ್ಲಿ ದಾಳಿ ನಡೆಸಲು ಉದ್ದೇಶಿಸಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗುಪ್ತಚರ ದಳದ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್ ಜನರಲ್ ಅವನೀತ್ ಕೌರ್ ಸಿಧು ಹೇಳಿದ್ದಾರೆ.