ಕನ್ನಡಪ್ರಭ ವಾರ್ತೆ ಬೆಂಗಳೂರು

ಅದೃಷ್ಟದ ಮಳೆ ಸುರಿಸಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಗುತ್ತಿಗೆದಾರ ಸೇರಿದಂತೆ ಇಬ್ಬರಿಗೆ 40 ಲಕ್ಷ ರು. ಹಣ ಪಡೆದು ವಂಚಿಸಿದ್ದ ಮೂವರು ಚಾಲಾಕಿ ವಂಚಕರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ಪ್ರಕಾಶ್ ಅಲಿಯಾಸ್ ವಿಜಯ್‌, ಚಿಕ್ಕಬಾಣವಾರದ ಸಿ.ಕೃಷ್ಣಸಿಂಗ್‌ ಹಾಗೂ ನವೀನ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 40 ಲಕ್ಷ ರು. ನಗದು ಹಾಗೂ ಒಂದು ಕಾರು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಹಿಟ್ನಾಲ್‌ ಗ್ರಾಮದ ರಮೇಶ್ ಅವರಿಗೆ ಆರೋಪಿಗಳು ವಂಚಿಸಿದ್ದರು. ಈ ದೂರಿನ ಮೇರೆಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್‌ ಹನುಮಂತರಾಜು ನೇತೃತ್ವದ ತಂಡವು, ಮೊಬೈಲ್ ಕರೆಗಳ ಲೋಕೇಷನ್ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಮೂರು ತಿಂಗಳು ಅದೃಷ್ಟದ ಮಳೆ


ಕೆಲ ವರ್ಷಗಳ ಹಿಂದೆ ಗಾಂಧಿನಗರದ ಹೋಟೆಲ್‌ನಲ್ಲಿ ವಿಜಯ್‌ಗೆ ಕೊಪ್ಪಳದ ಗುತ್ತಿಗೆದಾರ ರಮೇಶ್ ಪರಿಚಯವಾಗಿದ್ದು, ಬಳಿಕ ಪರಸ್ಪರ ಅವರಲ್ಲಿ ಆತ್ಮೀಯತೆ ಮೂಡಿದೆ. ಈ ಗೆಳೆತನದಿಂದ ರಮೇಶ್ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ವಿಜಯ್‌, ತನ್ನ ಗೆಳೆಯನಿಗೆ ನಾಜೂಕಿನ ಮಾತುಗಳಿಂದ ಮರುಳು ಮಾಡಿ ಟೋಪಿ ಹಾಕಲು ಯೋಜಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಕೃಷ್ಣ ಮತ್ತು ನವೀನ್ ಸಹಕರಿಸಿದ್ದಾರೆ. ಆಗ ಅದೃಷ್ಟದ ಮಳೆ ಹೆಸರಿನಲ್ಲಿ ವಂಚನೆಗೆ ಅವರು ಸಂಚು ರೂಪಿಸಿದ್ದರು.

ಅಂತೆಯೇ ರಮೇಶ್‌ಗೆ ಅದೃಷ್ಟದ ಮಳೆ ಸುರಿಸಿ ಹಣ ದ್ವಿಗುಣ ಮಾಡುತ್ತೇವೆ. ನೀವು 1 ಲಕ್ಷ ರು. ಕೊಟ್ಟರೆ 3 ಲಕ್ಷ ಕೊಡುವುದಾಗಿ ವಿಜಯ್ ಹೇಳಿದ್ದ. ದುರಾಸೆಯಿಂದ ಈ ಮಾತಿಗೆ ಒಪ್ಪಿದ ಗುತ್ತಿಗೆದಾರನಿಗೆ ತುಮಕೂರು ರಸ್ತೆಯ 8ನೇ ಮೈಲಿ ಸಮೀಪದ ಹೋಟೆಲ್‌ಗೆ ಹಣ ತರುವಂತೆ ಸೂಚಿಸಿದ್ದರು. ಪೂರ್ವನಿಗದಿಯಂತೆ ಆ ಹೋಟೆಲ್‌ಗೆ 28 ಲಕ್ಷ ರು. ಹಣದ ಜತೆ ಗುತ್ತಿಗೆದಾರ ಹೋಗಿದ್ದರು. ಆಗ ಗುತ್ತಿಗೆದಾರನನ್ನು ವಿಜಯ್ ಸಹಚರರು ಭೇಟಿಯಾಗಿ ಹಣ ಪಡೆದಿದ್ದಾರೆ.

ಹೋಟೆಲಲ್ಲಿ ಬಿಟ್ಟು ಪರಾರಿ!

ಹಣ ವಸೂಲಿಯಾದ ಬಳಿಕ ಆರೋಪಿಗಳು, ಕೆಲ ಹೊತ್ತಿನಲ್ಲೇ ಹಣ ದ್ವಿಗುಣಗೊಳಿಸುತ್ತೇವೆ. ಸ್ಪಲ್ಪ ಕಾರಿನ ಬಳಿಗೆ ಹೋಗಿ ಬರುತ್ತೇವೆ ಎಂದು ಹೇಳಿದ್ದಾರೆ. ಈ ಮಾತು ನಂಬಿ ಹೋಟೆಲ್‌ನಲ್ಲಿ ಗುತ್ತಿಗೆದಾರ ಕುಳಿತಿದ್ದಾರೆ. ಇತ್ತ ಹಣದ ಸಮೇತ ಅವರಿಗೆ ಮಂಕುಬೂದಿ ಎರಚಿ ಟಾಟಾ ಹೇಳಿ ಕಾರಿನಲ್ಲಿ ವಂಚಕರು ಪರಾರಿಯಾಗಿದ್ದರು. ಕೆಲ ಹೊತ್ತು ಕಾದರೂ ಆರೋಪಿಗಳು ಬಾರದೆ ಹೋದಾಗ ಶಂಕೆಗೊಂಡು ರಮೇಶ್ ಕರೆ ಮಾಡಿದ್ದಾರೆ. ಆದರೆ ವಂಚಕರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿದ್ದವು. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಬಾಗಲಗುಂಟೆ ಠಾಣೆಗೆ ರಮೇಶ್ ದೂರು ನೀಡಿದ್ದಾರೆ.

ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಗ ವಿಚಾರಣೆ ವೇಳೆ ಮತ್ತೊಂದು ವಂಚನೆ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿನ್ನಾಭರಣ ವ್ಯಾಪಾರಿಗೆ ಟೋಪಿ!

ಗುತ್ತಿಗೆದಾರನ ವಂಚನೆ ಪ್ರಕರಣದಲ್ಲಿ ವಿಚಾರಣೆ ವೇಳೆ ಚಿನ್ನದ ವ್ಯಾಪಾರಿ ದಿನೇಶ್ ಅವರಿಗೆ ಟೋಪಿ ಹಾಕಿದ್ದ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆಗ ದಿನೇಶ್ ಅವರಿಂದ 12 ಲಕ್ಷ ಪಡೆದು ವಂಚಿಸಿದ್ದರು. ಈ ಸಂಬಂಧ ಮತ್ತೊಂದು ಎಫ್‌ಐಆರ್ ದಾಖಲಿಸಲಾಯಿತು. ಈ ಎರಡು ಪ್ರಕರಣಗಳಲ್ಲಿ ಒಟ್ಟು 40 ಲಕ್ಷ ರು. ಹಣ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶನಿದೇವಾಲಯದಲ್ಲಿ ವಂಚಕರ ಸ್ನೇಹ!

ಆರೋಪಿ ಕ್ಯಾಬ್ ಚಾಲಕ ಕೃಷ್ಣ ಪಾವಗಡದ ಪ್ರಸಿದ್ಧ ಶನೇಶ್ವರ ಪರಮ ಭಕ್ತನಾಗಿದ್ದು, ಆಗಾಗ್ಗೆ ದೇವಾಲಯಕ್ಕೆ ಆತ ಭೇಟಿ ನೀಡುತ್ತಾನೆ. ಹೀಗೆ ಕೆಲ ವರ್ಷಗಳ ಹಿಂದೆ ದೇವರ ದರ್ಶನಕ್ಕೆ ಹೋದಾಗ ಆತನಿಗೆ ಪಾವಗಡ ತಾಲೂಕಿನ ಕೃಷಿಕ ವಿಜಯ್ ಪರಿಚಯವಾಗಿತ್ತು. ಈ ಗೆಳೆತನದಲ್ಲಿ ಆರೋಪಿಗಳು ವಂಚನೆ ಕೃತ್ಯಕ್ಕಿಳಿದು ಈಗ ಜೈಲು ಸೇರಿದ್ದಾರೆ.