2 ತಿಂಗಳಲ್ಲಿ 42 ಸ್ವತ್ತು ಕಳವು ಪ್ರಕರಣಗಳ ಪತ್ತೆ : 63 ಲಕ್ಷ ಮೌಲ್ಯದ ಸ್ವತ್ತುಗಳ ವಶ

| N/A | Published : Jul 15 2025, 01:00 AM IST / Updated: Jul 15 2025, 07:44 AM IST

2 ತಿಂಗಳಲ್ಲಿ 42 ಸ್ವತ್ತು ಕಳವು ಪ್ರಕರಣಗಳ ಪತ್ತೆ : 63 ಲಕ್ಷ ಮೌಲ್ಯದ ಸ್ವತ್ತುಗಳ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 2 ತಿಂಗಳ ಅವಧಿಯಲ್ಲಿ ನಗರ ಪೊಲೀಸ್ ಘಟಕದಿಂದ 42 ಸ್ವತ್ತು ಕಳುವು ಪ್ರಕರಣಗಳ ಪತ್ತೆ ಹಚ್ಚಿ, 63 ಲಕ್ಷ ಮೌಲ್ಯದ ಸ್ವತ್ತುಗಳ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

 ಮೈಸೂರು :   ಕಳೆದ 2 ತಿಂಗಳ ಅವಧಿಯಲ್ಲಿ ನಗರ ಪೊಲೀಸ್ ಘಟಕದಿಂದ 42 ಸ್ವತ್ತು ಕಳುವು ಪ್ರಕರಣಗಳ ಪತ್ತೆ ಹಚ್ಚಿ, 63 ಲಕ್ಷ ಮೌಲ್ಯದ ಸ್ವತ್ತುಗಳ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ತಿಂಗಳುಗಳಲ್ಲಿ 8 ಸರಗಳ್ಳತನ, 2 ಮನೆ ಕಳ್ಳತನ, 1 ಮನೆ ಕೆಲಸದವರಿಂದ ಕಳ್ಳತನ, 28 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಸೇರಿದಂತೆ ಒಟ್ಟು 42 ಸ್ವತ್ತು ಕಳುವು ಪ್ರಕರಣಗಳನ್ನು ಪತ್ತೆ ಮಾಡಿದ್ದು, 659 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ಪದಾರ್ಥ, 27 ದ್ವಿಚಕ್ರ ವಾಹನಗಳು, 1 ಕಾರು, 2.57 ಲಕ್ಷ ಹಣ, 1 ಲ್ಯಾಪ್ ಟಾಪ್ ಅನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಕಾರ್ಪೆಂಟರ್ ಬಂಧನ:

ಸೇಫ್ ಲಾಕರ್ ನಲ್ಲಿದ್ದ 26.16 ಲಕ್ಷ ರು. ಮೌಲ್ಯದ 287 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಿದ್ದ ಆರೋಪಿಯನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕಾರ್ಪೆಂಟರ್ ಕೆಲಸಕ್ಕೆ ಹೋಗಿದ್ದಾಗ ಮನೆಯ ಒಂದು ಕಿಟಕಿ ಬಾಗಿಲನ್ನು ತೆಗೆಯುವಂತೆ ವ್ಯವಸ್ಥೆ ಮಾಡಿಕೊಂಡಿದ್ದ. ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ಗೂಗಲ್ ಮೂಲಕ ಡಿಜಿಟಲ್ ಲಾಕರ್ ಓಪನ್ ಮಾಡಿ, ಅದರಲ್ಲಿದ್ದ ಅರ್ಧ ಭಾಗವನ್ನು ಮಾತ್ರ ಕಳವು ಮಾಡಿದ್ದ. ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೊಂಡಾ ಆಕ್ಟಿವಾ ಕಳ್ಳನ ಬಂಧನ:

ಇನ್ನೂ ಮಾಸ್ಟರ್ ಕೀ ಬಳಸಿ ಹೊಂಡಾ ಆಕ್ಟಿವಾ ದ್ವಿಚಕ್ರವಾಹನಗಳನ್ನೇ ಕಳ್ಳತನ ಮಾಡಿದ್ದ ಚಾಮರಾಜನಗರ ಮೂಲದ ಆರೋಪಿಯನ್ನು ದೇವರಾಜ ಠಾಣೆಯ ಪೊಲೀಸರು ಬಂಧಿಸಿ, 12.80 ಲಕ್ಷ ರು. ಮೌಲ್ಯದ ಒಟ್ಟು 24 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ. ಈತ ಮೈಸೂರಿನಲ್ಲಿ ಕಳವು ಮಾಡಿ, ಚಾಮರಾಜನಗರದಲ್ಲಿ ಸೀಜ್ ಆಗಿರುವ ಗಾಡಿ ಎಂಬ ನೆಪದಲ್ಲಿ 5 ರಿಂದ 6 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಬಂಧಿತನಿಂದ ದೇವರಾಜ ಠಾಣೆಯ 21, ಲಷ್ಕರ್ 1, ಉದಯಗಿರಿ 1, ಗುಂಡ್ಲುಪೇಟೆ ಠಾಣೆಯ 1 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.

ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 70 ಸಾವಿರ ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದು, ದೇವರಾಜ ಠಾಣೆಯ 1 ಮತ್ತು ಲಷ್ಕರ್ ಠಾಣೆಯ 1 ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ಸರಗಳ್ಳರ ಬಂಧನ:

ಲಷ್ಕರ್ ಠಾಣೆಯ ಪೊಲೀಸರು 3 ಆರೋಪಿಗಳನ್ನು ಬಂಧಿಸಿ, ಲಷ್ಕರ್ ಠಾಣೆಯ 3, ದೇವರಾಜ ಠಾಣೆಯ 1 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, 11.40 ಲಕ್ಷ ರು. ಮೌಲ್ಯದ 175 ಗ್ರಾಂ ತೂಕದ 4 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರಂ ಠಾಣೆ ಪೊಲೀಸರು 2 ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿ, ವಿದ್ಯಾರಣ್ಯಪುರಂ ಠಾಣೆಯ 2 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, 6.80 ಲಕ್ಷ ರು. ಮೌಲ್ಯದ ಒಟ್ಟು 85 ಗ್ರಾಂ ತೂಕದ 3 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.

ಉಳಿದಂತೆ ಕುವೆಂಪುನಗರ ಠಾಣೆಯ 1 ಸರಗಳ್ಳತನ, ಉದಯಗಿರಿ ಠಾಣೆಯ 1 ಮನೆ ಕಳ್ಳತನ(ಚಿನ್ನಾಭರಣ), 1 ಲ್ಯಾಪ್ ಟಾಪ್ ಕಳ್ಳತನ, ವಿ.ವಿ.ಪುರಂ ಠಾಣೆಯ 1 ದ್ವಿಚಕ್ರ ವಾಹನ ಕಳ್ಳತನ, ನಜರ್ ಬಾದ್ ಠಾಣೆಯ 1 ಸಾಮಾನ್ಯ ಕಳ್ಳತನದಲ್ಲಿ 2.50 ಲಕ್ಷ ಹಣ, 1 ವಾಹನ ಕಳ್ಳತನ (ಮಹಿಂದ್ರಾ ಎಕ್ಸ್ ಯುವಿ 500), ಮೇಟಗಳ್ಳಿ ಠಾಣೆಯ 1 ಮನೆ ಕೆಲಸದವರಿಂದ ಕಳ್ಳತನ (ಚಿನ್ನ, ಬೆಳ್ಳಿ ಪದಾರ್ಥಗಳು), ವಿಜಯನಗರ ಠಾಣೆಯ 1 ಸಾಮಾನ್ಯ ಕಳ್ಳತನ (ಫ್ಯಾಕ್ಟರಿ ಆವರಣದಿಂದ ತಾಮ್ರದ ಪದಾರ್ಥಗಳು) ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.

ಡಿಸಿಪಿಗಳಾದ ಬಿಂದು ಮಣಿ, ಸುಂದರ್ ರಾಜ್ ಇದ್ದರು.

11 ಎನ್.ಡಿ.ಪಿ.ಎಸ್. ಪ್ರಕರಣಗಳು

2025ನೇ ಸಾಲಿನ ಮೇ ಮಾಹೆಯಿಂದ ಈವರೆಗೆ ನಗರದಲ್ಲಿ ಒಟ್ಟು 11 ಎನ್.ಡಿ.ಪಿ.ಎಸ್. ಕಾಯ್ದೆಯ ಪ್ರಕರಣಗಳನ್ನು ದಾಖಲಿಸಿದ್ದು, 13 ಆರೋಪಿಗಳನ್ನು ಬಂಧಿಸಿ ಸುಮಾರು 18.50 ಲಕ್ಷ ರು. ಮೌಲ್ಯದ 65 ಕೆ.ಜಿ. 800 ಗ್ರಾಂ ಗಾಂಜಾ, 23 ಗ್ರಾಂ ಎಂಡಿಎಂಎ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

Read more Articles on