ಬೆಂಗಳೂರು : ರೈಸ್ ಪುಲ್ಲಿಂಗ್ ಚೊಂಬು ವಂಚನೆ - ಉದ್ಯಮಿಯಿಂದ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆ

| Published : Sep 13 2024, 01:36 AM IST / Updated: Sep 13 2024, 06:07 AM IST

ಸಾರಾಂಶ

ಕಚ್ಚಾ ತೈಲ ಮತ್ತು ರಿಫೈನರಿ ಪ್ಲಾಂಟ್‌ ತೆರೆಯಲು ಸಹಾಯ ಮಾಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಒಂದು ಗುಂಪು ವಂಚಿಸಿದೆ. ರೈಸ್ ಪುಲ್ಲಿಂಗ್ ಚೊಂಬುಗಳಿಂದ ಲಾಭ ಗಳಿಸುವುದಾಗಿ ನಂಬಿಸಿ, ಈ ಗುಂಪು ಉದ್ಯಮಿಯ ಜಮೀನು ಮತ್ತು ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದೆ.

 ಬೆಂಗಳೂರು :  ಕಚ್ಚಾ ತೈಲ ಮತ್ತು ರಿಫೈನರಿ ಪ್ಲಾಂಟ್‌ ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ಉದ್ಯಮಿಗೆ ನಂಬಿಸಿ ಬಳಿಕ ರೈಸ್‌ ಪುಲ್ಲಿಂಗ್‌ ಚೊಂಬು ವ್ಯವಹಾರದ ಕಥೆ ಕಟ್ಟಿ ಉದ್ಯಮಿಯ ಕೋಟ್ಯಂತರ ರುಪಾಯಿ ಮೌಲ್ಯದ ಜಮೀನು ಮತ್ತು ಮನೆ ಸೇರಿದಂತೆ ಸ್ಥಿರಾಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡು ವಂಚಿಸಿದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಂಚನೆಗೆ ಒಳಗಾದ ಹೆಣ್ಣೂರು ಪ್ರಕೃತಿ ಲೇಔಟ್‌ ನಿವಾಸಿ ವಿ.ಕಾಂತರಾಜು ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣದ ನಾಗರತ್ನ, ಹೊಳೆನರಸೀಪುರದ ರಾಮಚಂದ್ರ, ಬೆಂಗಳೂರಿನ ಸುಕುಮಾರನ್‌, ನಟೇಶ್‌ ಅಲಿಯಾಸ್‌ ವೆಂಕಟರಮಣನ್‌ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಅಪರಾಧಿಕ ಒಳಸಂಚು ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ಉದ್ಯಮಿ ಕಾಂತರಾಜು, ಗಂಗಾ ಬೋರ್‌ವೆಲ್‌ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಚ್ಚಾತೈಲ ಮತ್ತು ರಿಫೈನರಿ ಪ್ಲಾಂಟ್‌ ತೆರೆಯಲು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ಒಎನ್‌ಜಿಸಿ ಅಧಿಕಾರಿಗಳು ಕ್ಷೇತ್ರದಲ್ಲಿನ ಅನುಭವದ ಬಗ್ಗೆ ಮಾಹಿತಿ ನೀಡುವಂತೆ ಕಾಂತರಾಜುಗೆ ಕೇಳಿದ್ದಾರೆ. ಈ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದ ಕಾರಣ ಕಾಂತರಾಜುಗೆ ಒಎನ್‌ಜಿಸಿಯಿಂದ ಅನುಮತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಶ್ರೀರಾಮುಲು, ಅಶ್ವತ್ಥನಾರಾಯಣ ಪರಿಚಯ:

ಅನ್ಯ ಮಾರ್ಗ ಮೂಲಕ ಅನುಮತಿಗೆ ಕಾಂತರಾಜು ಪ್ರಯತ್ನಿಸುವಾಗ ಕನಕಪುರದ ಮನು ಮತ್ತು ರಾಮಣ್ಣ ಎಂಬುವವರ ಮೂಲಕ ಆರೋಪಿಗಳಾದ ನಾಗರತ್ನ ಮತ್ತು ರಾಮಚಂದ್ರಪ್ಪ ಪರಿಚಯವಾಗಿದೆ. ಈ ವೇಳೆ ನಾಗರತ್ನ, ಚನ್ನರಾಯಪಟ್ಟಣದಲ್ಲಿ ನನ್ನದು ಪೆಟ್ರೋಲ್‌ ಬಂಕ್‌ ಇದೆ. ನನಗೆ ಶ್ರೀರಾಮುಲು ಮತ್ತು ಅಶ್ವತ್ಥನಾರಾಯಣ ಪರಿಚಯವಿದ್ದಾರೆ. ಒಎನ್‌ಜಿಸಿಯಲ್ಲಿ ತುಂಬಾ ಅನುಭವವಿದೆ. ಪ್ಲಾಂಟ್ ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದಾರೆ.

₹5 ಲಕ್ಷ ಕೋಟಿಯ ಮೌಲ್ಯದ 5 ರೈಸ್‌ ಪುಲ್ಲಿಂಗ್‌ ಚೊಂಬು

ಈ ವ್ಯವಹಾರಕ್ಕೆ ಅಗತ್ಯವಾಗಿರುವ ಸಾವಿರಾರು ಕೋಟಿ ರುಪಾಯಿ ಬಂಡವಾಳ ಹಣ ಹೊಂದಿಸುವುದು ನಿಮ್ಮಿಂದ ಅಸಾಧ್ಯ. ನಮ್ಮ ಬಳಿ 5 ರೈಸ್‌ ಪುಲ್ಲಿಂಗ್‌ ಚೊಂಬುಗಳಿವೆ. ಅವುಗಳು ಸ್ಯಾಟಲೈಟ್‌ಗಳೊಂದಿಗೆ ಸಂಪರ್ಕ ಹೊಂದುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹5 ಲಕ್ಷ ಕೋಟಿ ಬೆಲೆ ಇದೆ ಎಂದು ನಂಬಿಸಿದ್ದಾರೆ. ಬಳಿಕ ನಟೇಶ್‌ ಮತ್ತು ಸುಕುಮಾರ್‌ ಎಂಬುವರು ಕಾಂತರಾಜು ಅವರನ್ನು ಹೋಟೆಲ್‌ಗೆ ಕರೆಸಿಕೊಂಡು ತಮ್ಮನ್ನು ರೇಡಿಯಸ್‌ ಕಂಪನಿ ಸಿಇಒಗಳು ಎಂದು ಪರಿಚಯಿಸಿಕೊಂಡಿದ್ದಾರೆ. ರಾಮಚಂದ್ರಪ್ಪ ತಾನು ಸಿಇಜಿಎಆರ್‌ಎನ್‌ ಕಂಪನಿ ಸಿಇಒ ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ತೋರಿಸಿ ಕಾಂತರಾಜು ಎದುರಿಗೆ ಪರೀಕ್ಷಿಸಿ ನಂಬಿಸಿದ್ದಾರೆ.

4 ಎಕರೆ 18 ಗಂಟೆ ಜಮೀನು ಬರೆಸಿಕೊಂಡರು

ಈ ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ನಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಅಲ್ಲಿಯವರೆಗೆ ನಿಮ್ಮ ಸ್ಥಿರಾಸ್ತಿಯನ್ನು ನಮಗೆ ಬರೆದುಕೊಡಬೇಕು. ಒಂದು ತಿಂಗಳೊಳಗೆ ರೈಸ್‌ ಪುಲ್ಲಿಂಗ್‌ ಚೊಂಬು ಮಾರಾಟ ಮಾಡಿ ಬಳಿಕ ನಿಮ್ಮ ಆಸ್ತಿಯನ್ನು ನಿಮಗೆ ವಾಪಾಸ್‌ ಬರೆದುಕೊಡುತ್ತೇವೆ ಎಂದು ಕಾಂತರಾಜುಗೆ ಹೇಳಿದ್ದಾರೆ. ಈ ಮಾತು ನಂಬಿ ಕಾಂತರಾಜು ಕನಕಪುರ ತಾಲೂಕು ಅತ್ತಿಗುಪ್ಪೆ ಗ್ರಾಮದಲ್ಲಿ ತಮ್ಮ ಹೆಸರಿನಲ್ಲಿ ಇದ್ದ 4 ಎಕರೆ 18 ಗುಂಟೆ ಜಮೀನನ್ನು 2021ರ ಆ.16ರಂದು ಸುಕುಮಾರನ್‌ ಪತ್ನಿ ಸವಿತಾ ಹೆಸರಿಗೆ ಕ್ರಯ ಮಾಡಿದ್ದಾರೆ. ಈ ವೇಳೆ ಆರೋಪಿಗಳು 3 ಚೆಕ್‌ಗಳ ಮೂಲಕ ₹60 ಲಕ್ಷವನ್ನು ಕಾಂತರಾಜು ಅವರ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಒಂದು ವಾರದ ಬಳಿಕ ನಿಮ್ಮ ಆಸ್ತಿ ವಾಪಾಸ್‌ ಬರೆದುಕೊಡುವುದಾಗಿ ಆ ₹60 ಲಕ್ಷ ವಾಪಾಸ್‌ ಪಡೆದಿದ್ದಾರೆ.

ಮನೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡರು:

ಇದಾದ ಒಂದು ತಿಂಗಳ ಬಳಿಕ ಕಾಂತರಾಜು ನನ್ನ ಆಸ್ತಿಯನ್ನು ವಾಪಾಸ್‌ ಬರೆದುಕೊಡುವಂತೆ, ಪ್ಲಾಂಟ್‌ ತೆರೆಯಲು ಒಎನ್‌ಜಿಸಿಯಿಂದ ಅನುಮತಿ ಕೊಡಿಸುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿಗಳು ರೈಸ್‌ ಪುಲ್ಲಿಂಗ್‌ ಚೊಂಬುಗಳು ಮಾರಾಟವಾಗಿಲ್ಲ. ಮಾರಾಟಕ್ಕೆ ಮಾರುಕಟ್ಟೆಯಲ್ಲಿ ₹1 ಕೋಟಿ ಠೇವಣಿ ಇರಿಸಬೇಕು. ಸವಿತಾಳಿಗೆ ₹60 ಲಕ್ಷ ಕೊಡಬೇಕು ಎಂದಿದ್ದಾರೆ.

ಹೀಗಾಗಿ ಥಣಿಸಂದ್ರದ ನಿಮ್ಮ ಮನೆಯನ್ನು ನಾವು ಹೇಳಿದವರಿಗೆ ಬರೆದುಕೊಡಬೇಕು. ಅವರು ನಿಮಗೆ ಹಣ ಕೊಡುತ್ತಾರೆ. ಆ ಹಣವನ್ನು ನೀವು ಸವಿತಾಗೆ ನೀಡಿ ನಿಮ್ಮ ಆಸ್ತಿಯನ್ನು ವಾಪಾಸ್‌ ಬರೆಸಿಕೊಡುತ್ತೇವೆ. ಉಳಿದ ಹಣವನ್ನು ಠೇವಣಿ ಇರಿಸುತ್ತೇವೆ ಎಂದಿದ್ದಾರೆ. ಇವರ ಮಾತು ನಂಬಿದ ಕಾಂತರಾಜು, ಥಣಿಸಂದ್ರದ ಮನೆಯನ್ನು ರಾಮಚಂದ್ರ ಪಳಸಿಕರನ್‌ ಎಂಬಾತನಿಗೆ 2021ರ ನ.15ರಂದು ಶುದ್ಧ ಕ್ರಯ ಮಾಡಿದ್ದಾರೆ.

ಚೊಂಬುಗಳು ₹100 ಕೋಟಿಗೆ ಮಾರಾಟ:

ಇದಾದ ಒಂದು ವರ್ಷದ ಬಳಿಕ ನಾಗರತ್ನ, ರಾಮಚಂದ್ರಪ್ಪ, ನಟೇಶ್‌ ಹಾಗೂ ಸುಕುಮಾರನ್‌ ಹೋಟೆಲ್‌ವೊಂದಕ್ಕೆ ಕಾಂಜರಾಜುನನ್ನು ಕರೆಸಿಕೊಂಡು ರೈಸ್‌ ಪುಲ್ಲಿಂಗ್‌ ಚೊಂಬುಗಳನ್ನು ಪರೀಕ್ಷಿಸಿ, ಈ ಚೊಂಬುಗಳು ಅಲ್ಫಾ, ಬೀಟಾ, ಗಾಮಾ ವಿಕರಣಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಈ ಚೊಂಬುಗಳಿಗೆ ₹100 ಕೋಟಿಗೆ ಮಾರಾಟವಾಗಿವೆ ಎಂದು ತಿಳಿಸಿದ್ದಾರೆ. ಬಳಿಕ ನೆಲಮಂಗಲ ಬಳಿಯ ಹೋಟೆಲ್‌ವೊಂದಕ್ಕೆ ಕಾಂತರಾಜುನನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಎ.ಸಿ.ಗಂಗರಾಜು ಎಂಬ ವ್ಯಕ್ತಿಯನ್ನು ತೋರಿಸಿದ್ದಾರೆ. ನೆಲಮಂಗಲದ ಶಿವನಹಳ್ಳಿ ಗ್ರಾಮದಲ್ಲಿನ ಕಾಂತರಾಜು ಅವರ 2 ಎಕರೆ 4 ಗುಂಟೆ ಜಮೀನನ್ನು ಗಂಗರಾಜು ಹೆಸರಿಗೆ ಜಿಪಿಎ ನೋಂದಣಿ ಮಾಡಿಸಿದ್ದಾರೆ.

₹500 ಕೋಟಿ ಖಾತೆಗೆ ವರ್ಗ ಎಂದು ಟೋಪಿ

ರೈಸ್‌ ಪುಲ್ಲಿಂಗ್‌ ಚೊಂಬು ಖರೀದಿಸಿರುವ ಕಂಪನಿಯಿಂದ ನಿಮ್ಮ ಮನೆಗೆ ₹100 ಕೋಟಿ ಬರುತ್ತದೆ ಮತ್ತು ಬ್ಯಾಂಕ್‌ ಖಾತೆಗೆ ₹500 ಕೋಟಿ ಬರುತ್ತದೆ ಎಂದು ಆರೋಪಿಗಳು ಕಾಂತುರಾಜುಗೆ ತಿಳಿಸಿದ್ದಾರೆ. ಈ ವೇಳೆ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಪ್ರತಿಗಳನ್ನು ಪಡೆದು, ಖಾಲಿ ಹಳೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ.

ಈ ನಡುವೆ ಗಂಗರಾಜು ಜಿಪಿಎ ಪತ್ರಗಳ ಆಧಾರದ ಮೇಲೆ ಕಾಂತರಾಜು ಅವರ 2 ಎಕರೆ 4 ಗುಂಟೆ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳು ಕಾಂತರಾಜುಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಸಿಸಿಬಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.