ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ₹51.95 ಲಕ್ಷ ನಗದು ಹಾಗೂ ₹50.79 ಲಕ್ಷ ಮೌಲ್ಯದ 824 ಗ್ರಾಂ ತೂಕದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಭಾರತೀಯ ಪ್ರಯಾಣಿಕನೊಬ್ಬ ಫೆ.29ರಂದು ರಾತ್ರಿ ಕೆಐಎ ವಿಮಾನ ನಿಲ್ದಾಣದಿಂದ ಕೌಲಲಾಂಪುರಕ್ಕೆ ₹500 ಮುಖಬೆಲೆಯ ನೋಟುಗಳಲ್ಲಿ ₹51.95 ಲಕ್ಷವನ್ನು ಲಗೇಜ್ ರೂಪದಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಾನೆ.
ಪ್ರಯಾಣಿಕರ ಲಗೇಜುಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವಾಗ ಬ್ಯಾಗ್‌ವೊಂದರ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ಪರಿಶೀಲಿಸಿದಾಗ ಹಣ ಇರುವುದು ಕಂಡು ಬಂದಿದೆ. ಕೂಡಲೇ ಆ ಹಣವನ್ನು ಜಪ್ತಿ ಮಾಡಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಾ.1ರ ರಾತ್ರಿ ದುಬೈನಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ಕಸ್ಟಮ್ಸ್ ಆಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ಈ ವೇಳೆ ಥೈಲ್ಯಾಂಡ್ ಮೂಲದ ಪ್ರಯಾಣಿಕನೊಬ್ಬನ ಲಗೇಜ್ ಪರಿಶೀಲಿಸಿದಾಗ ಪೇಸ್ಟ್ ರೂಪದಲ್ಲಿ ಬರೋಬ್ಬರಿ 824 ಗ್ರಾಂ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ. ಆತನನ್ನು ಬಂಧಿಸಿ, ಚಿನ್ನವನ್ನು ಜಪ್ತಿ ಮಾಡಲಾಗಿದೆ.