15% ಆಸೆ ತೋರಿಸಿ 700 ಜನರಿಗೆ ₹25 ಕೋಟಿ ಟೋಪಿ!

| Published : Dec 20 2023, 01:15 AM IST

ಸಾರಾಂಶ

ತನ್ನ ಕಂಪನಿಯಲ್ಲಿ ಅಲ್ಪಾವಧಿಗೆ ₹1 ಲಕ್ಷ ಬಂಡವಾಳ ಹೂಡಿದರೆ ಪ್ರತಿ ತಿಂಗಳು ₹15 ಸಾವಿರ ಆದಾಯ ನೀಡಿದ್ದ. ಅಲ್ಪಾವಧಿಯಲ್ಲಿ ಒಂದು ಲಕ್ಷಕ್ಕೆ ₹15 ಸಾವಿರ ಸಿಕ್ಕಿದ್ದರಿಂದ ದುರಾಸೆಗೆ ಬಿದ್ದು ಜನರು ಹೆಚ್ಚಿನ ಹಣ ಹೂಡಿಕೆ ಮಾಡಿದ್ದರು. ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಕಂಪನಿಯಲ್ಲಿ ಹಣ ಹೂಡಿಕೆ ಕೆಲ ಗ್ರಾಹಕರು ಸೆಳೆದಿದ್ದರು!

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕ ಲಾಭದಾಸೆ ತೋರಿಸಿ ಸುಮಾರು 700ಕ್ಕೂ ಹೆಚ್ಚಿನ ಜನರಿಂದ ₹25 ಕೋಟಿ ವಸೂಲಿ ಮಾಡಿ ಟೋಪಿ ಹಾಕಿದ್ದ ಬ್ಲೇಡ್ ಕಂಪನಿಯ ಮುಖ್ಯಸ್ಥ ಸೇರಿ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆಯ ಜಿ.ಎಸ್‌.ಪ್ರದೀಪ್ ಹಾಗೂ ನಾಗವಾರದ ವಸಂತ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ₹7 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹಣ ವಂಚನೆ ಬಗ್ಗೆ ಮಾಹಿತಿ ತಿಳಿದ ಸಿಸಿಬಿ, ದೊಡ್ಡಕಲ್ಲಸಂದ್ರದ 3ನೇ ಹಂತದ ನಾರಾಯಣನಗರದಲ್ಲಿದ್ದ ಆರೋಪಿ ಪ್ರದೀಪ್ ಒಡೆತನದ ಪ್ರಮ್ಯ ಇಂಟರ್ ನ್ಯಾಷನಲ್‌ ಕಚೇರಿ ಮೇಲೆ ದಾಳಿ ನಡೆಸಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಡ್ಡಿ ಆಸೆ ತೋರಿಸಿ ಜನರಿಗೆ ಉಂಡೆ ನಾಮ:

ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗುಂಡನಗೊಲ್ಲಹಳ್ಳಿ ಗ್ರಾಮದ ಪ್ರದೀಪ್‌, 2021ರಲ್ಲಿ ತನ್ನ ದೊಡ್ಡಕಲ್ಲಸಂದ್ರ ಸಮೀಪದ ನಾರಾಯಣ ನಗರದಲ್ಲಿ ತನ್ನ ಪತ್ನಿ ಸೌಮ್ಯಾ ಹೆಸರಿನಲ್ಲಿ ಪ್ರಮ್ಯ ಇಂಟರ್ ನ್ಯಾಷನಲ್‌ ಕಂಪನಿ ಆರಂಭಿಸಿದ್ದ. ಆದರೆ ಇದು ಸರ್ಕಾರದಲ್ಲಿ ನೋಂದಣಿ ಮಾಡಿಸಿರಲಿಲ್ಲ. ಈ ಕಂಪನಿಗೆ ವಂಸತ್ ವ್ಯವಸ್ಥಾಪಕನಾಗಿದ್ದ. ತನ್ನ ಕಂಪನಿಯಲ್ಲಿ ಕೈ ಸಾಲದ ರೂಪದಲ್ಲಿ ಬಂಡವಾಳ ಹೂಡಿದರೆ ಶೇ.15ರಿಂದ ಶೇ.20ರಷ್ಟು ಆದಾಯ ಕೊಡುವುದಾಗಿ ಪ್ರದೀಪ್ ಹೇಳಿದ್ದ. ಇದಕ್ಕೆ ಮರುಳಾಗಿ ಜನರು ಹೂಡಿಕೆ ಮಾಡಿದ್ದರು. ಮೊದ ಮೊದಲು ಒಂದೆರೆಡು ಕಂತು ಲಾಭ ವಿತರಿಸಿ ದೊಡ್ಡ ಮೊತ್ತದ ಹಣ ಹೂಡಿಕೆಗೆ ಗ್ರಾಹಕರಿಗೆ ಅವರು ಪ್ರಚೋದಿಸುತ್ತಿದ್ದರು. ಹೀಗೆ ಲಕ್ಷಾಂತರ ಹಣ ತೊಡಗಿಸಿದ ಬಳಿಕ ಆರೋಪಿಗಳು ವಂಚಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂದರೆ ತನ್ನ ಕಂಪನಿಯಲ್ಲಿ ಅಲ್ಪಾವಧಿಗೆ ₹1 ಲಕ್ಷ ಬಂಡವಾಳ ಹೂಡಿದರೆ ಪ್ರತಿ ತಿಂಗಳು ₹15 ಸಾವಿರ ಆದಾಯ ನೀಡಿದ್ದ. ಅಲ್ಪಾವಧಿಯಲ್ಲಿ ಒಂದು ಲಕ್ಷಕ್ಕೆ ₹15 ಸಾವಿರ ಸಿಕ್ಕಿದ್ದರಿಂದ ದುರಾಸೆಗೆ ಬಿದ್ದು ಜನರು ಹೆಚ್ಚಿನ ಹಣ ಹೂಡಿಕೆ ಮಾಡಿದ್ದರು. ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಕಂಪನಿಯಲ್ಲಿ ಹಣ ಹೂಡಿಕೆ ಕೆಲ ಗ್ರಾಹಕರು ಸೆಳೆದಿದ್ದರು. ಹೀಗೆ ಎರಡು ವರ್ಷಗಳ ಅ‍‍ವಧಿಯಲ್ಲಿ ಈ ಬ್ಲೇಡ್‌ ಕಂಪನಿಗೆ ಸುಮಾರು 700 ಜನರಿಂದ ₹25 ಕೋಟಿ ಹೂಡಿಕೆಯಾಗಿತ್ತು. ಮೊದಲು ತಾವು ಹೂಡಿದ ಹಣಕ್ಕೆ ಪೂರ್ವ ಒಪ್ಪಂದಂತೆ ರಿರ್ಟನ್ಸ್‌ ನೀಡಿದ ಆರೋಪಿಗಳು ಬಳಿಕ ಲಾಭದ ಹಂಚಿಕೆಗೆ ಏನೇನೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಈ ವಂಚನೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧ ದಳದ ಇನ್‌ಸ್ಪೆಕ್ಟರ್‌ ಪ್ರವೀಣ್ ಸಿ.ಯಲಿಗಾರ್‌, ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸದಸ್ಯರನ್ನಾಗಿ ಮಾಡಿದರೆ ಕಮಿಷನ್‌: ತಮ್ಮ ಕಂಪನಿಗೆ ಹೊಸ ಸದಸ್ಯರಿಂದ ಹಣ ಹೂಡಿಕೆ ಮಾಡಿದರೆ ಹಳೆ ಗ್ರಾಹಕರಿಗೆ ಆರೋಪಿಗಳು ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದರು. ಈ ಆಮಿಷಕ್ಕೊಳಗಾದ ಕೆಲವರು, ಕಮಿಷನ್ ಆಸೆಗೆ ತಮ್ಮ ಪರಿಚಿತರಿಂದಲೂ ಬ್ಲೇಡ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.₹70 ಕೋಟಿ ವಹಿವಾಟು: ಎರಡು ವರ್ಷಗಳ ಅವಧಿಯಲ್ಲಿ ಪ್ರದೀಪ್ ಸುಮಾರು ₹70 ಕೋಟಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ವಂಚನೆ ಮೊತ್ತವು ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.