ಸಾರಾಂಶ
ಹಾಜರಾತಿಯ ಬೆರಳಚ್ಚು ಗುರುತಿನ ದಾಖಲೆಯ ಪರಿಶೀಲನೆ ವೇಳೆ ಕೆಲವು ನಕಲಿ ಕಂಡು ಬಂದ ಹಿನ್ನೆಲೆ ತಿಹಾರ್ ಜೈಲಿನ ಆಡಳಿತ ತನ್ನ 50 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿ ಸುತ್ತೋಲೆ ಹೊರಡಿಸಿದೆ.
ನವದೆಹಲಿ: ಹಾಜರಾತಿಯ ಬೆರಳಚ್ಚು ಗುರುತಿನ ದಾಖಲೆಯ ಪರಿಶೀಲನೆ ವೇಳೆ ಕೆಲವು ನಕಲಿ ಕಂಡು ಬಂದ ಹಿನ್ನೆಲೆ ತಿಹಾರ್ ಜೈಲಿನ ಆಡಳಿತ ತನ್ನ 50 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿ ಸುತ್ತೋಲೆ ಹೊರಡಿಸಿದೆ. ವಜಾಗೊಂಡವರಲ್ಲಿ 39 ಮಂದಿ ಕಾವಲುಗಾರರು, 9 ಮಂದಿ ಸಹಾಯಕ ಅಧೀಕ್ಷಕರು ಮತ್ತು ಇಬ್ಬರು ಮಹಿಳಾ ವ್ಯವಸ್ಥಾಪಕರು ಇದ್ದಾರೆ. ಮೇಲಿನ ಮೂರು ಹುದ್ದೆಗಳಿಗೆ ಪರೀಕ್ಷೆ ನಡೆಸಿ ಸುಮಾರು 450 ಅಭ್ಯರ್ಥಿಗಳನ್ನು ನೇಮಕ ಮಾಡಿದ ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (ಡಿಎಸ್‌ಎಸ್‌ಬಿ) ಸೂಚನೆ ಮೇರೆಗೆ ತಿಹಾರ್ ಜೈಲಿನ ಆಡಳಿತ ನಕಲಿ ಉದ್ಯೋಗಿಗಳ ವಜಾಗೊಳಿಸಿ ನೋಟಿಸ್ ಹೊರಡಿಸಿದೆ. ‘450 ಮಂದಿ ಪೈಕಿ 50 ಮಂದಿಯ ಬೆರಳಚ್ಚು ಗುರುತು ತಾಳೆಯಾಗುತ್ತಿಲ್ಲ. ವಜಾಗೊಂಡವರ ಬದಲಿಗೆ ಇತರರು ಪರೀಕ್ಷೆ ಬರೆದಿರಬಹುದು ಎಂದು ಶಂಕಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಎಲ್ಲ ಉದ್ಯೋಗಿಗಳು ಎರಡು ವರ್ಷದ ಪ್ರೊಬೆಷನ್ ಅವಧಿಗೆ ನೇಮಕವಾಗಿದ್ದರು.