ಸಾರಾಂಶ
ಮದ್ದೂರು : ಸಿದ್ದ ಉಡುಪುಗಳ ಮೇಲಿನ ಕಲೆ ತೆಗೆಯುವ ದ್ರಾವಣದ ಬಾಟೆಲ್ ಸ್ಫೋಟಗೊಂಡು ವೆಲ್ಡಿಂಗ್ ಕೆಲಸಗಾರ ಸೇರಿದಂತೆ ಮೂವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.
ಕಾರ್ಖಾನೆಯಲ್ಲಿ ಕಣ್ಣೆದುರಿಗೆ ನಡೆದ ಘಟನೆಯಿಂದ ಬೆಚ್ಚಿಬಿದ್ದ ಮಹಿಳಾ ಕಾರ್ಮಿಕರೆ ಸ್ಥಳದಲ್ಲೇ ಕುಸಿದು ಬಿದ್ದು ಅಸ್ವಸ್ಥಗೊಂಡ ಪ್ರಸಂಗ ನಡೆದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೈಗಾರಿಕಾ ಪ್ರದೇಶದ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್‌ನ ಗಾರ್ಮೆಂಟ್ಸ್ ನ ಪ್ರಿಂಟಿಂಗ್ ಹೆಲ್ಪರ್ ಶಿವಕುಮಾರ್ (50), ಪ್ರಿಂಟಿಂಗ್ ಆಪರೇಟರ್ ಪ್ರಸನ್ನ (42) ಹಾಗೂ ವೆಲ್ಡರ್ ಅವಿನಾಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ ಶಿವಕುಮಾರ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ಪ್ರಸನ್ನ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಅವಿನಾಶ್ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ ಲಕ್ಷ್ಮಿ ಮದ್ದೂರು ಖಾಸಗಿ ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.
ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಿಂಟಿಂಗ್ ವಿಭಾಗದಲ್ಲಿ ಬಟ್ಟೆ ಮೇಲೆ ಬಿದ್ದಿದ್ದ ಕಲೆ ತೆಗೆಯುವ ರಾಸಾಯನಿಕ ದ್ರವವನ್ನು ಕುಲುಕಿದಾಗ ದ್ರವ ಹೊರಬರದ ಕಾರಣ ಹೆಲ್ಪರ್ ಶಿವಕುಮಾರ್ ಬೆಂಕಿ ಬಿಸಿ ಹೀಟರ್ ಗನ್ ಬಳಸುತ್ತಿದ್ದಾಗ ಅನಿಲದೊಂದಿಗೆ ರಾಸಾಯನಿಕ ದ್ರವದ ಬಾಟಲ್ ದಿಢೀರ್ ಸಿಡಿದ ಪರಿಣಾಮ ಶಿವಕುಮಾರ್ ಕೈಗಳು ಮತ್ತು ಮುಖಕ್ಕೆ ಸುಟ್ಟ ಗಾಯವಾಗಿದೆ. ಈತನ ಪಕ್ಕದಲ್ಲಿದ್ದ ಆಪರೇಟರ್ ಪ್ರಸನ್ನ ಕೈಗಳಿಗೂ ಗಾಯಗಳಾಗಿವೆ.
ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಇದೇ ಪ್ರಿಂಟಿಂಗ್ ವಿಭಾಗದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಅವಿನಾಶ್ ಸಹ ಮುಂಜಾಗ್ರತಾ ಕ್ರಮ ವಹಿಸದೆ ಕಾಂಕ್ರೀಟ್ ಗಾರೆ ಕತ್ತರಿಸುವಾಗ ಕಟರ್ ಯಂತ್ರ ಆತನ ಎಡಗೈ ಮೇಲೆ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಶಾಹಿ ಗಾರ್ಮೆಂಟ್ಸ್ ನಲ್ಲಿ ಪದೇ ಪದೇ ಇಂತಹ ಅವಘಡಗಳು ಸಂಭವಿಸುತ್ತಿದ್ದರೂ ಸಹ ಆಡಳಿತ ಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ಸ್ ವರ್ಕರ್ ಯೂನಿಯನ್‌ನ ಅಧ್ಯಕ್ಷೆ ವಿ.ಎಸ್ .ಶೃತಿ, ಸಂಘಟನಾ ಕಾರ್ಯದರ್ಶಿ ಉಮೇಶ್ , ಪ್ರಧಾನ ಕಾರ್ಯದರ್ಶಿ ಎ.ಎಚ್. ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ನಡೆದ ಘಟನೆಗೆ ಗಾರ್ಮೆಂಟ್ಸ್ ನ ಪ್ರಿಂಟಿಂಗ್ ವಿಭಾಗದ ಮೇಲ್ವಿಚಾರಕ ಚಿಟ್ಟಿಬಾಬು ಪ್ರಮುಖ ಕಾರಣರಾಗಿದ್ದಾರೆ. ಇವರ ವಿರುದ್ಧ ಆಡಳಿತ ಮಂಡಳಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕಾರ್ಮಿಕ ಮುಖಂಡರು ಆಗ್ರಹಪಡಿಸಿದರು.