₹2 ಸಾವಿರಕ್ಕಾಗಿ ಅಪ್ರಾಪ್ತನಿಂದ ಯುವತಿ ಹತ್ಯೆ ಕೇಸ್‌ ಸಿಐಡಿಗೆ

| Published : Jun 25 2024, 12:31 AM IST / Updated: Jun 25 2024, 04:51 AM IST

₹2 ಸಾವಿರಕ್ಕಾಗಿ ಅಪ್ರಾಪ್ತನಿಂದ ಯುವತಿ ಹತ್ಯೆ ಕೇಸ್‌ ಸಿಐಡಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ತಿಂಗಳು ನಗರದ ಸುಬ್ರಹ್ಮಣ್ಯಪುರದ ಬೃಂದಾವನ ಲೇಔಟ್‌ನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಭುದ್ಯಾ ಬರ್ಬರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

  ಬೆಂಗಳೂರು ;    ಕಳೆದ ತಿಂಗಳು ನಗರದ ಸುಬ್ರಹ್ಮಣ್ಯಪುರದ ಬೃಂದಾವನ ಲೇಔಟ್‌ನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಭುದ್ಯಾ ಬರ್ಬರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಮೃತಳ ತಾಯಿ ಸಾಮಾಜಿಕ ಕಾರ್ಯಕರ್ತೆ ಕೆ.ಆರ್‌.ಸೌಮ್ಯ ಅವರು ಸೋಮವಾರ ಸಾಮಾಜಿಕ ಕಾರ್ಯಕರ್ತೆಯರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ರಿಯ ಭೀಕರ ಕೊಲೆ ಪ್ರಕರಣವನ್ನು ಸಿಐಡಿ ತನಿಖೆ ವಹಿಸುವಂತೆ ಮನವಿ ಮಾಡಿದರು. ಈ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಐಡಿ ತನಿಖೆ ವಹಿಸುವಂತೆ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ತಾಯಿ ಮತ್ತು ಸಹೋದರನ ಜತೆಗೆ ಬೃಂದಾವನ ಲೇಔಟ್‌ನಲ್ಲಿ ನೆಲೆಸಿದ್ದ ಪ್ರಭುದ್ಯಾ, ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಮೇ 15ರಂದು ಸಂಜೆ ಮನೆಯ ಬಾತ್‌ ರೂಮ್‌ನಲ್ಲಿ ಪ್ರಭುದ್ಯಾಳ ಬಲ ಕುತ್ತಿಗೆ ಮತ್ತು ಎಡಗೈ ಕೊಯ್ದು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಬಳಿಕ ಮೃತಳ ತಾಯಿ ಕೆ.ಆರ್‌.ಸೌಮ್ಯಾ ಅವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಬಳಿಕ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿತ್ತು. ಎರಡು ಸಾವಿರ ರುಪಾಯಿ ಸಾಲದ ಹಣದ ವಿಚಾರಕ್ಕೆ ಪರಿಚಿತ ಅಪ್ರಾಪ್ತ, ಪ್ರಭುದ್ಯಾ ಜತೆಗೆ ಜಗಳ ತೆಗೆದು ಚಾಕುವಿನಿಂದ ಕತ್ತು ಮತ್ತು ಕೈ ಕೊಯ್ದು ಕೊಲೆ ಮಾಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಸಿಎಂಗೆ ನೀಡಿದ ಮನವಿಯಲ್ಲಿ ಏನಿದೆ?

ಕೊಲೆಯಾದ ಪ್ರಭುದ್ಯಾಳ ತಾಯಿ ಸಾಮಾಜಿಕ ಕಾರ್ಯಕರ್ತೆ ಕೆ.ಆರ್‌.ಸೌಮ್ಯಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ತನಿಖೆ ಬಗ್ಗೆ ಆತಂಕ ಮತ್ತು ಸಂದೇಶ ವ್ಯಕ್ತಪಡಿಸಿದ್ದಾರೆ. 

ಮಗಳ ಹತ್ಯೆಯ ಮೊದಲ ದಿನದಿಂದಲೂ ಸುಬ್ರಹ್ಮಣ್ಯಪುರ ಠಾಣೆ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ಬಹುಆಘಾತ ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೇ ಹೇಳಿದರೂ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆರೋಪಿಯ ತಂದೆ-ತಾಯಿಯನ್ನು ರಕ್ಷಿಸುವ ದುರುದ್ದೇಶದಿಂದ ಪ್ರಕರಣವನ್ನು ನಿರ್ಲಕ್ಷ್ಯಿಸಿದ್ದರು. ಬಾಲ ನ್ಯಾಯ ಮಂಡಳಿಯಲ್ಲಿ ವಕೀಲರಿಗೆ ಯಾವುದೇ ಮಾಹಿತಿ ನೀಡದ ಪರಿಣಾಮ ಆರೋಪಿಯು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ. ನನಗೆ ಈ ಪೊಲೀಸರ ತನಿಖೆ ಕುರಿತು ಆತಂಕ ಮತ್ತು ಸಂದೇಹಗಳಿವೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಕೆ.ಆರ್‌.ಸೌಮ್ಯಾ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.