ಆರ್ಥಿಕ ಸಮಸ್ಯೆ ಸಿಲುಕಿ ಜಿಗುಪ್ಸೆಗೊಂಡಿದ್ದ ಕ್ಯಾಂಟರಿಂಗ್ ಉದ್ಯಮಿಯೊಬ್ಬ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಆರ್ಥಿಕ ಸಮಸ್ಯೆ ಸಿಲುಕಿ ಜಿಗುಪ್ಸೆಗೊಂಡಿದ್ದ ಕ್ಯಾಂಟರಿಂಗ್ ಉದ್ಯಮಿಯೊಬ್ಬ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ಷಯ ನಗರದ ನಿವಾಸಿ ಕುಲೋಲ್‌ ದುತ್ತ (48) ಮೃತ ವ್ಯಕ್ತಿ. ಗುಜರಾತ್ ಮೂಲದ ಕುಲೋಲ್‌ ಅವರು ನಗರದಲ್ಲಿ ಕ್ಯಾಂಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಅರೆಕೆರೆಯ ಬಿಎನ್‌ಎಸ್ ಲಾಡ್ಜ್‌ಗೆ ಸೋಮವಾರ ಬೆಳಗ್ಗೆ ಬಂದಿದ್ದ ಕುಲೋಲ್‌ ಕೊಠಡಿ ಪಡೆದಿದ್ದರು. ಆದರೆ, ರಾತ್ರಿಯಾದರೂ ಊಟಕ್ಕೆ ಕುಲೋಲ್‌ ಹೊರಗೆ ಬಾರದ್ದರಿಂದ ಸಿಬ್ಬಂದಿಗೆ ಅನುಮಾನ ಬಂದಿದೆ. ಊಟ ನೀಡಲು ಅವರ ಕೊಠಡಿಗೆ ತೆರಳಿದ್ದಾಗ ನೇಣಿನ ಕುಣಿಕೆಯಲ್ಲಿ ಕುಲೋಲ್‌ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಲಾಡ್ಜ್ ಸಿಬ್ಬಂದಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಕುಲೋಲ್‌ ಸ್ನೇಹಿತನ ವಿರುದ್ಧ ದೂರು: ಈ ಆತ್ಮಹತ್ಯೆ ಪ್ರಕರಣ ಸಂಬಂಧ ಕುಲೋಲ್‌ ಅವರ ಸ್ನೇಹಿತ ಮರಿಸ್ವಾಮಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಕಲಾಗಿದೆ. ತಮ್ಮ ಪತಿ ಸಾವಿಗೆ ಮರಿಸ್ವಾಮಿ ಕಿರುಕುಳ ಕಾರಣವೆಂದು ಕುಲೋಲ್‌ ಪತ್ನಿ ಸಜಿನಿ ದುತ್ತ ಅವರು ದೂರು ನೀಡಿದ್ದಾರೆ. ಆದರೆ, ಮೃತ ಕುಲೋಲ್ ತಂಗಿದ್ದ ಲಾಡ್ಜ್‌ ಕೊಠಡಿಯಲ್ಲಿ ಮರಣ ಪತ್ರ ಪತ್ತೆಯಾಗಿದ್ದು, ಇದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಹಣಕಾಸು ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.