ಸಾರಾಂಶ
ಪೊಲೀಸರು ತಪಾಸಣೆ ನಡೆಸುವ ವೇಳೆ ಮಾಡಿದ ಎಡವಟ್ಟಿನಿಂದ ನಾಯಿಕಚ್ಚಿದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿ ಬೈಕ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಮಗುವಿನ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ನಡೆದಿದೆ.
ಮಂಡ್ಯ : ಹೆಲ್ಮೆಟ್ ಹಾಕದವರನ್ನು ಗುರಿಯಾಗಿಸಿಕೊಂಟು ಸಂಚಾರಿ ಪೊಲೀಸರು ತಪಾಸಣೆ ನಡೆಸುವ ವೇಳೆ ಮಾಡಿದ ಎಡವಟ್ಟಿನಿಂದ ನಾಯಿಕಚ್ಚಿದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿ ಬೈಕ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಮಗುವಿನ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ನಗರದ ಸ್ವರ್ಣಸಂದ್ರ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿಯ ಹೃತೀಕ್ಷಾ (3) ಸಾವನ್ನಪ್ಪಿದ ಮಗು. ಮಗುವಿನ ತಂದೆ ಅಶೋಕ್ ಮತ್ತು ತಾಯಿ ವಾಣಿ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯಿಂದ ಸ್ಥಳೀಯ ಸಾರ್ವಜನಿಕರು ಸಂಚಾರಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಗುವಿನ ಪೋಷಕರಿಗೆ ಬೆಂಬಲಕ್ಕೆ ನಿಂತು ಹೆದ್ದಾರಿಯಲ್ಲೇ ಕುಳಿತು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
ಏನಾಯ್ತು?
ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ ಮತ್ತು ಅಶೋಕ್ ದಂಪತಿ ಪುತ್ರಿ ಹೃತೀಕ್ಷಾಗೆ ನಾಯಿ ಕಚ್ಚಿತ್ತು. ಮಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಬೈಕ್‌ನಲ್ಲಿ ದಂಪತಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದರು. ಇದೇ ಸಮಯಕ್ಕೆ ನಗರದ ಸ್ವರ್ಣಸಂದ್ರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು.
ಇದೇ ವೇಳೆಗೆ ಬೈಕ್‌ನಲ್ಲಿ ಆಗಮಿಸಿದ ಅಶೋಕ್ ಹೆಲ್ಮೆಟ್ ಧರಿಸಿರಲಿಲ್ಲ. ಆತನನ್ನು ಅಡ್ಡಗಟ್ಟುವುದಕ್ಕೆ ಪೊಲೀಸರು ರಸ್ತೆ ಮಧ್ಯಕ್ಕೆ ತೆರಳಿದಾಗ ಆಯತಪ್ಪಿ ಬೈಕ್‌ನಿಂದ ಮೂವರು ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಮಗುವಿನ ತಲೆ ನೆಲಕ್ಕೆ ಬಡಿದ ಪರಿಣಾಮ ತೀವ್ರ ರಕ್ತಸ್ರಾವವಾಯಿತು.
ಮಗುವಿನ ಸ್ಥಿತಿ ಕಂಡು ಹೆತ್ತವರು ಮಗುವನ್ನು ಮಡಿಲಿನಲ್ಲಿರಿಸಿಕೊಂಡು ಗೋಳಿಟ್ಟರು. ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ತಕ್ಷಣವೇ ಎಚ್ಚೆತ್ತ ಪೊಲೀಸರು ಗಂಭೀರ ಸ್ಥಿತಿಯಲ್ಲಿದ್ದ ಮಗು ಹಾಗೂ ಪೋಷಕರನ್ನು ಆಟೋ ಹತ್ತಿಸಿ ಮಿಮ್ಸ್ ಆಸ್ಪತ್ರೆಗೆ ಕಳುಹಿಸಿದರು. ಬಳಿಕ ಬೈಕ್ ತಳ್ಳಿಕೊಂಡು ಹೋಗುವುದರಲ್ಲಿ ಪೊಲೀಸರು ಬ್ಯುಸಿಯಾದರು. ಮಗುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸುವಷ್ಟರಲ್ಲಿ ಮಗು ಅಸುನೀಗಿತ್ತು.
ಮಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ:
ಮಗುವಿನ ಶವವನ್ನು ಎತ್ತಿಕೊಂಡು ಬಂದ ಪೋಷಕರು ಮಿಮ್ಸ್ ಎದುರಿನ ಹೆದ್ದಾರಿ ಬಳಿ ಕುಳಿತು ಪ್ರತಿಭಟನೆ ನಡೆಸಿದಾಗ ಸುತ್ತಮುತ್ತಲಿದ್ದ ಸಾರ್ವಜನಿಕರೂ ಪೋಷಕರಿಗೆ ಬೆಂಬಲವಾಗಿ ನಿಂತು ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಚಾರಿ ಪೊಲೀಸರ ತಪ್ಪಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಮೃತ ಮಗುವಿನ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಪೋಷಕರು ಪ್ರತಿಭಟನೆ ಕೈಬಿಟ್ಟು ಮರಣೋತ್ತರ ಪರೀಕ್ಷೆಗೆ ಮಗು ಶವವನ್ನು ಕೊಂಡೊಯ್ದರು.
ಮರಣೋತ್ತರ ಪರೀಕ್ಷೆಗೆ ಒಪ್ಪದ ಪೋಷಕರು:
ಇದೇ ವೇಳೆಗೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಸ್ಥಳಕ್ಕೆ ಆಗಮಿಸಿದರು. ತಪ್ಪಿತಸ್ಥ ಪೊಲೀಸರ ತಲೆದಂಡವಾಗದೆ, ಪರಿಹಾರ ಘೋಷಿಸದೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಮಗುವಿನ ಮರಣೋತ್ತರ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಮಧ್ಯೆ ಪೋಷಕರು, ಕುಟುಂಬಸ್ಥರೂ ಕೂಡ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸಲಿಲ್ಲ. ಮತ್ತೆ ಮಗುವಿನೊಂದಿಗೆ ಹೆದ್ದಾರಿಗೆ ತೆರಳಿದ ಪೋಷಕರು ಹಾಗೂ ಕುಟುಂಬಸ್ಥರು ಮಿಮ್ಸ್ ಎದುರಿನ ಹೆದ್ದಾರಿಯಲ್ಲಿ ಕುಳಿತು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಮತ್ತೆ ಪ್ರತಿಭಟನೆಗಿಳಿದರು.
ಪೋಷಕರೊಂದಿಗೆ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಕೂಡ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸುವಂತೆ ಬಿಗಿಪಟ್ಟು ಹಿಡಿದರು.
ಮೂವರು ಸಂಚಾರಿ ಎಎಸ್‌ಐಗಳ ತಲೆದಂಡ:
ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ ಟ್ರಾಫಿಕ್ ಪೊಲೀಸರ ತಲೆದಂಡಕ್ಕೆ ಮುಂದಾಯಿತು. ಸ್ಥಳದಲ್ಲಿದ್ದ ಪೊಲೀಸರ ಕುರಿತು ಪ್ರಾಥಮಿಕ ವರದಿ ಪಡೆದುಕೊಂಡರು. ಎಎಸ್‌ಗಳಾದ ಗುರುದೇವ್, ನಾಗರಾಜು, ಜಯರಾಂ ಅವರ ನೇತೃತ್ವದಲ್ಲಿ ತಪಾಸದಣೆ ನಡೆಯುತ್ತಿತ್ತು. ಇವರೊಂದಿಗೆ ಮೂವರು ಸಿಬ್ಬಂದಿ ಕೂಡ ಇದ್ದರು. ಆರು ಮಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಕೊನೆಗೆ ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದ ಎಎಸ್‌ಐಗಳಾದ ನಾಗರಾಜು, ಜಯರಾಂ, ಗುರುದೇವ್ ಅವರನ್ನು ಅಮಾನತುಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಪೊಲೀಸರು ಸುರಕ್ಷತಾ ನಿಯಮ ಪಾಲಿಸಿಲ್ಲ: ಎಸ್‌ಪಿ
ಮಂಡ್ಯ : ಹೆಲ್ಮೆಟ್ ತಪಾಸಣೆ ಸಮಯದಲ್ಲಿ ಸಂಚಾರಿ ಪೊಲೀಸರು ಸುರಕ್ಷತಾ ನಿಯಮ ಪಾಲಿಸದೆ ಮಗು ಬರುತ್ತಿದ್ದ ವಾಹನವನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಹಿಂಭಾಗದಿಂದ ಬಂದ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಾಗ ಮಗು ಕೆಳಗೆ ಬಿದ್ದಿದೆ. ವಾಹನ ಮಗು ಮೇಲೆ ಹರಿದಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿ ಪರಿಶೀಲನೆ ನಡೆಸಲಾಗುವುದು. ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಮಗುವಿನ ಮೇಲೆ ವಾಹನ ಹತ್ತಿದೆಯಾ ಅಥವಾ ಪೊಲೀಸರು ತಡೆದು ಬೀಳಿಸಿದ್ದಾರಾ ಎಂಬುದೆಲ್ಲವೂ ಗೊತ್ತಾಗಬೇಕಿದೆ. ಇದು ಹಳೆಯ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹೆದ್ದಾರಿ ನಗರದ ಒಳಗೆ ಹೋಗುವ ಕಾರಣದಿಂದ ಇಲ್ಲಿ ತಪಾಸಣೆ ಮಾಡಲಾಗಿದೆ. ತಪಾಸಣೆ ವೇಳೆ ಸುರಕ್ಷಿತ ಕ್ರಮ ಕೈಗೊಂಡಿಲ್ಲದ ಕಾರಣ ಮೂವರು ಎಎಸ್‌ಐಗಳನ್ನು ಅಮಾನತು ಮಾಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
)

;Resize=(128,128))
;Resize=(128,128))
;Resize=(128,128))
;Resize=(128,128))