ಗ್ರಾಹಕರು ಕೇಳಿದ ಬೈಕುಗಳನ್ನೇ ಕದ್ದು ಮಾರುತ್ತಿದ್ದ ಚಾಲಾಕಿ ಕಳ್ಳ ಬಂಧನ

| Published : Jul 02 2025, 01:47 AM IST

ಗ್ರಾಹಕರು ಕೇಳಿದ ಬೈಕುಗಳನ್ನೇ ಕದ್ದು ಮಾರುತ್ತಿದ್ದ ಚಾಲಾಕಿ ಕಳ್ಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿ ಮೂಲದ ಪಿ.ಹೇಮಂತ್ ಬಂಧಿತನಾಗಿದ್ದು, ಆರೋಪಿಯಿಂದ 40 ಲಕ್ಷ ರು. ಮೌಲ್ಯದ 32 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ವಿಭೂತಿಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಮಂತ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ವರ್ಷಗಳಿಂದ ಬೈಕ್ ಕಳ್ಳತನಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ಬೈಕ್‌ಗಳನ್ನು ಕದ್ದು ಬಳಿಕ ತನ್ನೂರಿನ ಕಡೆ ಹೇಮಂತ್ ಮಾರಾಟ ಮಾಡುತ್ತಿದ್ದ. ಈ ಕಳವು ಬೈಕ್‌ಗಳನ್ನು ವಿಲೇವಾರಿ ಮಾಡಲು ಆತನಿಗೆ ಸ್ನೇಹಿತ ಸಾಥ್ ಕೊಟ್ಟಿದ್ದ. ಹೀಗಾಗಿ ಜನರಿಗೆ ಯಾವ ರೀತಿಯ ಬೈಕ್ ಬೇಕು ಎಂದು ಹೇಮಂತ್‌ಗೆ ಆತನ ಗೆಳೆಯ ಹೇಳುತ್ತಿದ್ದ. ಅದರಂತೆ ಆ ಬೈಕ್‌ ಅನ್ನು ರಾತ್ರಿ ಆರೋಪಿ ಕಳವು ಮಾಡುತ್ತಿದ್ದ. ಕೆಲವರಿಗೆ ಪಲ್ಸರ್, ಬುಲೆಟ್ ಹೀಗೆ ಯಾವ ಮಾದರಿಯ ಬೈಕ್ ಇಷ್ಟಪಟ್ಟು ಜನರು ಕೇಳಿದರೆ ಸಾಕು ಆತ ಕಳವು ಮಾಡುತ್ತಿದ್ದ. ತನ್ನ ಸೆಕೆಂಡ್ ಹ್ಯಾಂಡ್‌ ಬೈಕ್‌ ಮಾರಾಟಗಾರ ಎಂದು ಹೇಮಂತ್ ಬಿಂಬಿಸಿಕೊಂಡಿದ್ದ. ಈತನ ಬಂಧನದಿಂದ ಕೆ.ಆರ್‌.ಪುರ, ಆವಲಹಳ್ಳಿ, ಎಚ್‌ಎಎಲ್‌, ಹೊಸಕೋಟೆ ಹಾಗೂ ವಿಜಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 16 ಬೈಕ್‌ಗಳ ಮಾಲಿಕರು ಪತ್ತೆಯಾಗಿದ್ದಾರೆ. ಇನ್ನುಳಿದ ಬೈಕ್‌ಗಳ ಮಾಲಿಕರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.