ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು

| Published : Dec 16 2023, 02:00 AM IST

ಸಾರಾಂಶ

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು, ಸೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ, ಪರಿಹಾರಕ್ಕೆ ನೀಡಲು ಆಗ್ರಹ, ಹಳೆಯ ಕಾಲದ ವಿದ್ಯುತ್ ಲೈನುಗಳನ್ನು ಬದಲಿಸಿದ ಕಾರಣ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿವೆ: ಆರೋಪ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ತಾಲೂಕಿನ ಅರೆಬೂವನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಂಜುನಾಥ (51) ಮೃತ ದುರ್ದೈವಿ. ಮಂಜುನಾಥ್ ಬೆಳಗ್ಗೆ ತನ್ನ ಮನೆ ಸಮೀಪವೇ ಇದ್ದ ಜಮೀನಿಲ್ಲಿ ಕೆಲಸ ಮಾಡಲು ಹೊರಟಿದ್ದರು. ಈ ವೇಳೆ ಜಮೀನಿನ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಇದನ್ನು ಗಮನಿಸದೇ ತುಳಿದು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಮೃತ ಮಂಜುನಾಥ್‌ ಪತ್ನಿ ಸೇರಿದಂತೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಸುದ್ದಿ ತಿಳಿದ ಕೂಡಲೇ ಸೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರೈತರಿಂದ ಸೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ, ಪರಿಹಾರಕ್ಕೆ ಒತ್ತಾಯ:

ಘಟನಾ ಸ್ಥಳಕ್ಕೆ ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮತ್ತು ರೈತಸಂಘದ ಪದಾಧಿಕಾರಿಗಳು ಭೇಟಿ ನೀಡಿದರು.

ತಾಲೂಕಿನಲ್ಲಿ ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಸೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡ ನಡೆದು ರೈತ ಕುಟುಂಬದ ಜೀವ ಬಲಿಯಾಗಿದೆ. ಈಗಾಗಲೇ ತಾಲೂಕಿನಾದ್ಯಂತ ವಿದ್ಯುತ್‌ ಅವಘಡದಿಂದ ಹಲವು ಜನ ಮತ್ತು ಜಾನುವಾರುಗಳು ಬಲಿಯಾಗಿದ್ದರೂ ಸೆಸ್ಕಾಂ ಇಲಾಖೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.

ವಿದ್ಯುತ್ ಅವಘಡಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಿಕೆಯಲ್ಲಿಯೂ ವಿದ್ಯುತ್ ಇಲಾಖೆ ವಿಳಂಬ ಧೋರಣೆ ತಾಳಿದೆ. ಹಳೆಯ ಕಾಲದ ವಿದ್ಯುತ್ ಲೈನುಗಳನ್ನು ಬದಲಿಸಿದ ಕಾರಣ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿವೆ. ಇದರ ಅರಿವಿಲ್ಲದೆ ತಂತಿ ತುಳಿದ ಜನ ಮತ್ತು ಜಾನುವಾರುಗಳು ವಿದ್ಯುತ್ ಪ್ರವಹಿಸಿ ಸಾವನ್ನುಪ್ಪುವಂತಾಗಿದೆ ಎಂದು ದೂರಿದರು.

ಮೃತ ರೈತ ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು

ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಚೌಡೇನಹಳ್ಳಿ ನಾಗರಾಜು, ವಕೀಲ ಕುರುಬಳ್ಳಿನಾಗೇಶ್, ಮಂಚನಹಳ್ಳಿ ನಾಗೇಗೌಡ ಇತರರು ಇದ್ದರು.15ಕೆಎಂಎನ್ ಡಿ24

ವಿದ್ಯುತ್ ತಂತಿ ತುಳಿದು ಸಾವಿಗೀಡಾದ ರೈತ ಮಂಜುನಾಥ.