ಸಾರಾಂಶ
ಎಂದಿನಂತೆ ಮನೆ ಪಾತ್ರೆಗಳನ್ನು ಕಾಲುವೆಯಲ್ಲಿ ತೊಳೆಯುತ್ತಿದ್ದ ವೇಳೆ ಕಾಲುವೆ ಪಕ್ಕದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆ ಕಾಂಪೌಂಡ್ ಏಕಾಏಕಿ ಶಾಂತಾ ಅವರ ಮೇಲೆ ಕುಸಿದು ಬಿದ್ದು ಈ ಘಟನೆ ಸಂಭವಿಸಿದೆ.
ಶ್ರೀರಂಗಪಟ್ಟಣ : ಕಾಲುವೆಯಲ್ಲಿ ಪಾತ್ರೆ ತೊಳೆಯತ್ತದ್ದ ಗೃಹಿಣಿ ಮೇಲೆ ಮನೆ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಕುಮಾರ್ ಅವರ ಪತ್ನಿ ಶಾಂತಾ (50) ಮೃತ ಮಹಿಳೆ. ಎಂದಿನಂತೆ ಮನೆ ಪಾತ್ರೆಗಳನ್ನು ಕಾಲುವೆಯಲ್ಲಿ ತೊಳೆಯುತ್ತಿದ್ದ ವೇಳೆ ಕಾಲುವೆ ಪಕ್ಕದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆ ಕಾಂಪೌಂಡ್ ಏಕಾಏಕಿ ಶಾಂತಾ ಅವರ ಮೇಲೆ ಕುಸಿದು ಬಿದ್ದು ಈ ಘಟನೆ ಸಂಭವಿಸಿದೆ.
ತಕ್ಷಣ ಪತಿ ರಾಜಕುಮಾರ್ ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಘಟನೆ ನಡೆದ ಸ್ಥಳದಲ್ಲಿ ನಿತ್ಯ ಹತ್ತಾರು ಮಹಿಳೆಯರು ತಮ್ಮ ಮನೆ ಪಾತ್ರೆ, ಬಟ್ಟೆಗಳನ್ನು ತೊಳಿಯುತ್ತಿದ್ದರು. ಆದರೆ, ಇಂದು ಶಾಂತ ಒಬ್ಬರೆ ಪಾತ್ರೆ ತೊಳೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಈ ಹಿಂದೆ ಗ್ರಾಮದಲ್ಲಿ ಹಾಯ್ದು ಹೋಗಿರುವ ಕಿರು ಕಾಲುವೆ ದುರಸ್ಥಿ ವೇಳೆ ಜೆಸಿಬಿ ಯಂತ್ರಗಳಿಂದ ಕೆಲಸ ಮಾಡಿದ್ದರಿಂದ ಕಾಂಪೌಂಡ್ ದುರಸ್ಥಿಗೊಂಡಿತ್ತು. ಸರಿ ಪಡಿಸುವಂತೆ ಹೇಳಿದ್ದರೂ ಗುತ್ತಿಗೆದಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಇದೀಗ ಈ ಘಟನೆ ಸಂಭವಿಸಿದೆ ಎಂದು ಗ್ರಾಪಂ ಸದಸ್ಯ ಪ್ರಭಾಕರ್ ಆರೋಪಿಸಿದ್ದಾರೆ.
ಟ್ರ್ಯಾಕ್ಟರ್ ಟೇಲರ್‌ಗೆ ಬೈಕ್ ಡಿಕ್ಕಿ: ಸವಾರ ಸಾವು
ಮದ್ದೂರು: ರಸ್ತೆ ಮಧ್ಯೆ ನಿಂತಿದ್ದ ಟ್ರ್ಯಾಕ್ಟರ್‌ನ ಟೇಲರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಬಳಿ ಬುಧವಾರ ರಾತ್ರಿ ಜರುಗಿದೆ.
ಮಂಡ್ಯ ನಗರದ ಗುತ್ತಲು ಬಡಾವಣೆಯ ಶಿವನಂಜಪ್ಪ ಪುತ್ರ ಕಿರಣ್ 25 ಮೃತಪಟ್ಟವರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಿರಣ್ ಸ್ಥಳದಲ್ಲಿ ಕೊನೆ ಉಸಿರೆಳೆದಿದ್ದಾರೆ.
ರಾಮನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕಿರಣ್ ಮಂಡ್ಯ ಗುತ್ತಲು ಬಡಾವಣೆಯ ತನ್ನ ಅಜ್ಜಿ ಮನೆಗೆ ಬಂದು ವಾಪಸ್ ತೆರಳುದ್ದಾಗ ಗೆಜ್ಜಲಗೆರೆ ಮನ್ಮುಲ್ ಬಳಿ ರಸ್ತೆ ಮಧ್ಯೆ ನಿಂತಿದ್ದ ಟ್ರ್ಯಾಕ್ಟರ್ ಟೇಲರ್‌ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.