ಸಾರಾಂಶ
ಬೆಂಗಳೂರು : ವ್ಯಕ್ತಿಯೊಬ್ಬರು ಕಾರಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮತ್ತಿಕೆರೆ ನಿವಾಸಿ ಅಶ್ವಿನ್ ಕುಮಾರ್ (42) ಮೃತರು. ಅಶ್ವಿನ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಶನಿವಾರ ರಾತ್ರಿ ಕಾರ್ಯ ನಿಮಿತ್ತ ಮನೆಯಿಂದ ಕಾರಿನಲ್ಲಿ ಹೊರಗೆ ಬಂದಿದ್ದರು. ತಡರಾತ್ರಿಯಾದರೂ ಅಶ್ವಿನ್ ಮನೆಗೆ ವಾಪಾಸ್ ಬಂದಿರಲಿಲ್ಲ. ಕುಟುಂಬದ ಸದಸ್ಯರು ಹಲವು ಬಾರಿ ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮತ್ತೊಂದೆಡೆ ಕೊಡಿಗೇಹಳ್ಳಿ ಸಮೀಪದ ತಿಂಡ್ಲು ಮುಖ್ಯರಸ್ತೆಯ ಮೇಲ್ಸೇತುವೆ ಬಳಿ ನಿಂತಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿರುವುದನ್ನು ಸ್ಥಳೀಯರು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಪರಿಶೀಲಿಸಿದಾಗ ಕಾರಿನ ಚಾಲಕನ ಆಸನದಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಆ ವ್ಯಕ್ತಿಯ ಜೇಬಿನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಆತನ ಹೆಸರು ಅಶ್ವಿನ್ ಕುಮಾರ್ ಎಂಬುದು ಗೊತ್ತಾಗಿದೆ. ಕುಟುಂಬಕ್ಕೆ ಮಾಹಿತಿ ನೀಡಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೃದಯಾಘಾತದಿಂದ ಅಶ್ವಿನ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಕುಟುಂಬದವರು ಅಶ್ವಿನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.