ಸಾರಾಂಶ
ಮದ್ದೂರು : ರಜೆ ಮೇಲೆ ಹುಟ್ಟೂರಿಗೆ ಬಂದಿದ್ದ ಯೋಧ ಮನೆ ಮೆಟ್ಟಿಲಿನಿಂದ ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಚಾಮನಹಳ್ಳಿಯಲ್ಲಿ ಬುಧವಾರ ರಾತ್ರಿ ಜರುಗಿದೆ.
ಹರಿಯಾಣ ರಾಜ್ಯದ ಇಸಾರ್‌ನಲ್ಲಿನ ಭೂಸೇನೆಯಲ್ಲಿ 140 ರೆಜಿಮೆಂಟ್ ನಾಯಕ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಕೆ.ಸಂದೀಪ್ 38 ಮೃತಪಟ್ಟ ಯೋಧ. ಮೃತರಿಗೆ ಪತ್ನಿ ಸ್ಪೂರ್ತಿ, ಮಕ್ಕಳಾದ ಪರೀಕ್ಷಿತ್ ಮತ್ತು ಉದ್ವಿಕ್ ಹಾಗೂ ತಾಯಿ ಶಶಿಕಲಾ ಇದ್ದಾರೆ.
ದೇಶದ ಅನೇಕ ರಾಜ್ಯಗಳಲ್ಲಿ 16 ವರ್ಷಗಳ ಕಾಲ ಭೂಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸಿದ್ದ ಸಂದೀಪ್ ಪ್ರಸ್ತುತ ಹರಿಯಾಣದ ಇಸಾರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜು.22ರಂದು ಒಂದು ತಿಂಗಳ ಕಾಲದ ರಜೆ ಮೇಲೆ ಹುಟ್ಟೂರು ಚಾಮನಹಳ್ಳಿಗೆ ಬಂದಿದ್ದರು.
ಬುಧವಾರ ರಾತ್ರಿ 9.30ರ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡಲು ಮನೆ ಮಹಡಿಯ ಮೆಟ್ಟಿಲು ಹತ್ತುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಬಿದ್ದ ಪೆಟ್ಟಿನಿಂದ ಅಸ್ವಸ್ಥಗೊಂಡಿದ್ದಾರೆ. ಕುಟುಂಬದವರು ಸಂದೀಪ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮದ್ದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂದೀಪ್ ಅವರ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರ ವಶಕ್ಕೆ ಹಸ್ತಾಂತರಿಸಲಾಯಿತು.
ತಹಸೀಲ್ದಾರ್ ಸೋಮಶೇಖರ್, ವೃತ್ತ ನಿರೀಕ್ಷಕ ಶಿವಕುಮಾರ್ ಮೃತರ ನಿವಾಸಕ್ಕೆ ತೆರಳಿ ತಾಲೂಕು ಆಡಳಿತದ ಪರವಾಗಿ ಪುಷ್ಪಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಜಿಲ್ಲಾ ಸಶಸ್ತ್ರ ದಳದ ಪೊಲೀಸರು ಗೌರವ ವಂದನೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಚಾಮನಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.