ಸಾರಾಂಶ
ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡು ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದ 6ನೇ ಹಂತದಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರದ ಹೊಸೂರು ರಸ್ತೆಯಲ್ಲಿ ನಡೆದಿದೆ.
ನಗರದ ಹೊಸೂರು ರಸ್ತೆಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ ವಿದ್ಯಾರ್ಥಿ ಕರಸಾಲ ರಾಹುಲ್ (21) ಮೃತ ದುರ್ದೈವಿ. ಎಂದಿನಂತೆ ಕಾಲೇಜಿಗೆ ಮಂಗಳವಾರ ಬೆಳಗ್ಗೆ ತೆರಳಿದ್ದಾಗ ಏಕಾಏಕಿ ಕಟ್ಟಡದ 6ನೇ ಹಂತದಿಂದ ಜಿಗಿದು ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಪೊಲೀಸರಿಗೆ ಕಾಲೇಜಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹಲವು ವರ್ಷಗಳಿಂದ ಬಳ್ಳಾರಿಗೆ ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಮೂಲದ ರಾಹುಲ್ ಕುಟುಂಬವು ವಲಸೆ ಬಂದಿತ್ತು. ಮಕ್ಕಳ ಶಿಕ್ಷಣ ಸಲುವಾಗಿ ರಾಹುಲ್ ಪೋಷಕರು ಬೆಂಗಳೂರಿಗೆ ಬಂದಿದ್ದರು.
ತನ್ನ ತಾಯಿ ಝಾನ್ಸಿ ರಾಣಿ ಜತೆ ಕೂಡ್ಲುಗೇಟ್ ಸಮೀಪ ನೆಲೆಸಿದ್ದ ರಾಹುಲ್, ಹೊಸೂರು ರಸ್ತೆಯ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಸಿಂಗಾಪುರದಲ್ಲಿ ಆತನ ತಂದೆ ಸುನೀಲ್ ವಿಜಯ್ ಉದ್ಯೋಗದಲ್ಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಹುಲ್, 5ನೇ ಸೆಮಿಸ್ಟರ್‌ನಲ್ಲಿ ಶೇ.80ರಷ್ಟು ಅಂಕ ಪಡೆದಿದ್ದ. ಆದರೆ ಕಾಲೇಜಿನಲ್ಲಿ ಮಂಗಳವಾರ ಕಿರುಪರೀಕ್ಷೆಗೆ ಗೈರಾಗಿದ್ದ ಆತ, ದಿಢೀರನೇ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಶರಣಾಗಿದ್ದಾನೆ. ತಮ್ಮ ಪುತ್ರನ ಸಾವಿನ ವಿಷಯ ತಿಳಿದು ಸಿಂಗಾಪುರದಲ್ಲಿದ್ದ ಆತನ ತಂದೆ ಸುನೀಲ್ ನಗರಕ್ಕೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಮೃತನ ಬಳಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೃತ ರಾಹುಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆ ಹಿಂದಿನ ಕಾರಣದ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ಷದಲ್ಲಿ 3ನೇ ಆತ್ಮಹತ್ಯೆ
ಒಂದು ವರ್ಷದ ಅವಧಿಯಲ್ಲಿ ಈ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಮೂರನೇ ಪ್ರಕರಣ ಇದಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ಹಾಗೂ ಬೋಧಕ ವೃಂದವನ್ನು ಕೂಡ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.