ಸಾರಾಂಶ
ಬೆಂಗಳೂರು : ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ತೀವ್ರವಾಗಿ ಗಾಯಗೊಂಡು ಆಟೋ ಚಾಲಕ ಮೃತಪಟ್ಟ ಘಟನೆ ಜಯನಗರದಲ್ಲಿ ನಡೆದಿದೆ.
ಜಯನಗರದ 4ನೇ ಟಿ ಬ್ಲಾಕ್‌ನ 19ನೇ ಮುಖ್ಯರಸ್ತೆಯಲ್ಲಿ ಬೆಳಗ್ಗೆ 8.20ರ ಸುಮಾರಿಗೆ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಮರ ಬಿದ್ದು, ಪಾದರಾಯನಪುರ ನಿವಾಸಿ ಆಟೋ ಚಾಲಕ ಕಲೀಂ ಖಾನ್ (60) ತಲೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದೆ. ತಕ್ಷಣ ಆಟೋ ಚಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 2 ಗಂಟೆಗೆ ಮೃತಪಟ್ಟಿದ್ದಾರೆ.
ಬಿಬಿಎಂಪಿಯು ಕಲೀಂ ಖಾನ್ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸುವ ಜತೆಗೆ ಸಂಪೂರ್ಣ ಆಸ್ಪತ್ರೆ ಖರ್ಚು ವೆಚ್ಚ ಭರಿಸುವ ಭರವಸೆ ನೀಡಿದೆ.
ಮರ ಬಿದ್ದು ಆಟೋ ಚಾಲಕ ಗಾಯಗೊಂಡ ಸ್ಥಳಕ್ಕೆ ಸ್ಥಳೀಯ ಶಾಸಕ ರಾಮಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
20 ದಿನದಲ್ಲಿ ಎರಡು ಬಲಿ
ಬೆಂಗಳೂರಿನಲ್ಲಿ ಕಳೆದ 20 ದಿನದಲ್ಲಿ ಮರ ಬಿದ್ದು ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಕಳೆದ ಆ.16ರಂದು ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ಬೃಹತ್ ಮರ ಆಟೋ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಶಿವರುದ್ರಯ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.