ಸಾರಾಂಶ
ಬೆಂಗಳೂರು : ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಯುವಕನ ಕೊಲೆ ಮಾಡಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ನಿವಾಸಿ ಮಂಜುನಾಥ್(17) ಕೊಲೆಯಾದ ದುರ್ದೈವಿ. ಭಾನುವಾರ ಮುಂಜಾನೆ ವೈಮ್ಯಾಕ್ ಸರ್ಕಲ್ ಬಳಿಯ ಖಾಲಿ ಜಾಗದ ಕಸದ ರಾಶಿ ಬಳಿ ಈ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಂಜುನಾಥ್‌ಗೆ ತಂದೆ-ತಾಯಿ ಇಲ್ಲ. ಹೀಗಾಗಿ ಅಬ್ಬಿಗೆರೆಯ ಚಿಕ್ಕಪ್ಪನ ಮನೆಗೆಯಲ್ಲಿ ನೆಲೆಸಿದ್ದ. ಎಸ್ಸೆಸ್ಸೆಲ್ಸಿ ಅನುತ್ತೀರ್ಣನಾಗಿದ್ದ ಮಂಜುನಾಥ್ ಚಿಕ್ಕಪ್ಪನ ಜತೆಗೆ ಮರಗೆಲಸ ಮಾಡಿಕೊಂಡಿದ್ದ. ಭಾನುವಾರ ಮುಂಜಾನೆ ಸುಮಾರು 2.30ಕ್ಕೆ ಮನೆಯಿಂದ ಹೊರಗೆ ಬಂದಿರುವ ಮಂಜುನಾಥ್, ವೈಮ್ಯಾಕ್ಸ್ ಸರ್ಕಲ್ ಬಳಿ ನಡೆಯುತ್ತಿದ್ದ ನಾಟಕ ನೋಡಲು ಹೋಗಿದ್ದ. ನಾಟಕ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ ಕ್ಷುಲ್ಲಕ ವಿಚಾರಕ್ಕೆ ಸ್ಥಳೀಯ ಯುವಕರ ಜತೆ ಜಗಳ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಸದ ರಾಶಿ ಬಳಿ ಮೃತದೇಹ ಪತ್ತೆ: ಬೆಳಗ್ಗೆ ಮಂಜುನಾಥ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಆತಕಂಗೊಂಡು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾಗಿಲ್ಲ. ಇದರಿಂದ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಭಾನುವಾರ ಬೆಳಗ್ಗೆ ಸುಮಾರು 11ಕ್ಕೆ ವೈಮ್ಯಾಕ್ ಸರ್ಕಲ್ ಬಳಿಯ ಖಾಲಿ ಜಾಗದ ಕಸದ ರಾಶಿ ಸಮೀಪ ಅಪರಿಚಿತ ಮೃತದೇಹ ಬಿದ್ದಿರುವುದನ್ನು ದಾರಿಹೋಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಮೃತ ವ್ಯಕ್ತಿ ಮಂಜುನಾಥ್ ಎಂಬುದು ಗೊತ್ತಾಗಿದೆ. ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಮಂಜುನಾಥ್‌ನನ್ನು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.