ತಾಯಿಯ ನಿಂದಿಸಿದ್ದಕ್ಕೆ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಯುವಕನ ಕೊಲೆ

| Published : Jun 25 2024, 12:31 AM IST / Updated: Jun 25 2024, 04:53 AM IST

ತಾಯಿಯ ನಿಂದಿಸಿದ್ದಕ್ಕೆ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಯುವಕನ ಕೊಲೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಲ್ಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ತಾಯಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಲ್ಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಲ್ಲಿಪುರ ನಿವಾಸಿ ಪನ್ನೀರ್ ಸೆಲ್ವಂ(36) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪದಡಿ ಮೃತನ ಪರಿಚಿತರಾದ ಪ್ರೇಮ್ ಕುಮಾರ್(21) ಮತ್ತು ಮದನ್(23) ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕೊಲೆಯಾದ ಪನ್ನೀರ್‌ ಸೆಲ್ವಂ ಗಾರೆ ಕೆಲಸ ಮಾಡಿಕೊಂಡು ಪತ್ನಿ ಮಕ್ಕಳ ಜತೆ ವಲ್ಲಿಪುರನಲ್ಲಿ ವಾಸವಾಗಿದ್ದ. ಮದ್ಯದ ಚಟಕ್ಕೆ ಬಿದ್ದಿದ್ದ ಪನ್ನೀರ್‌ ಪ್ರತಿನಿತ್ಯ ಸಂಜೆ ಮದ್ಯದ ಅಮಲಿನಲ್ಲಿ ಅಕ್ಕ-ಪಕ್ಕದ ನಿವಾಸಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ.

ಭಾನುವಾರ ಬೆಳಗ್ಗೆ ಪನ್ನೀರ್ ಸೆಲ್ವಂ ಮದ್ಯದ ನಶೆಯಲ್ಲಿ ಪ್ರೇಮ್‌ಕುಮಾರ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅದೇ ವಿಚಾರವಾಗಿ ಪನ್ನೀರ್ ಸೆಲ್ವಂ ಹಾಗೂ ಆರೋಪಿಗಳ ನಡುವೆ ಮಾತಿಗೆ ಮಾತು ಬೆಳೆದ ಗಲಾಟೆಯಾಗಿದೆ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ, ಮಧ್ಯಾಹ್ನವೂ ಇಬ್ಬರ ನಡುವೆ ಗಲಾಟೆಯಾಗಿದೆ.

ಕರೆ ಮಾಡಿ ಕರೆಸಿಕೊಂಡು ಕೊಲೆ:

ಆರೋಪಿಗಳು ಸಂಜೆ ಸುಮಾರು 4 ಗಂಟೆಗೆ ಪನ್ನೀರ್ ಸೆಲ್ವಂಗೆ ಕರೆ ಮಾಡಿ ಕೆ.ಸಿ.ಜನರಲ್ ಆಸ್ಪತ್ರೆ ಆವರಣದ ಹಿಂಭಾಗದಲ್ಲಿರುವ ಪಾರ್ಕ್‌ಗೆ ಬರುವಂತೆ ಕರೆದಿದ್ದಾರೆ. ಅದರಂತೆ ಪನ್ನೀರ್ ಸೆಲ್ವಂ ಪಾರ್ಕ್ ಬಂದಾಗ, ಗಲಾಟೆ ವಿಚಾರ ಪ್ರಸ್ತಾಪಿಸಿರುವ ಆರೋಪಿಗಳು ಮತ್ತೆ ಪನ್ನಿರ್‌ ಜತೆಗೆ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಆರೋಪಿಗಳು ಸ್ಥಳದಲ್ಲೇ ಇದ್ದ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಪನ್ನೀರ್ ಸೆಲ್ವಂನನ್ನು ಕೊಲೆಗೈದು ಪರಾರಿಯಾಗಿದ್ದಾರೆ.

ಬೆಳಗ್ಗೆ ದಾರಿಹೋಕರು ಅಪರಿಚಿತನ ಮೃತದೇಹ ಕಂಡು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಮುಖದ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಮೃತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ತಾಂತ್ರಿಕ ಹಾಗೂ ಬಾತ್ಮೀದಾರರ ಮಾಹಿತಿ ಮೇರೆಗೆ ಕೊಲೆಯಾಗಿರುವ ವ್ಯಕ್ತಿ ಪನ್ನೀರ್ ಸೆಲ್ವಂ ಎಂಬುದು ಗೊತ್ತಾಗಿದೆ. ಬಳಿಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾದ ಪನ್ನೀರ್‌ ಸೇಲ್ವಂ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಕೊಲೆ ಘಟನೆ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.